ಬೆಂಗಳೂರು: ಕಲಾವಿದರ ಮಾಸಾಶನ ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್‍ಕುಮಾರ್ ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ಪ್ರಶ್ನೋತ್ತರ ವೇಳೆ ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶೆಂಪೂರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಲಾವಿದರಿಗೆ ನೀಡುತ್ತಿರುವ ಮಾಸಾಶನ ನಿರ್ವಹಣೆಗೆ ಸಾಕಾಗುತ್ತಿಲ್ಲ ಎಂಬ ಬೇಡಿಕೆ ಇದೆ. ಹೀಗಾಗಿ ಅವರಿಗೆ ನೀಡುತ್ತಿರುವ ಮಾಸಾಶನ ಹೆಚ್ಚಳ ಮಾಡಬೇಕೆಂಬ ಪ್ರಸ್ತಾವನೆ ನಮ್ಮ ಮುಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಣಕಾಸು ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.
ರಾಜ್ಯದಲ್ಲಿ ವಿವಿಧ ಸಂಘ - ಸಂಸ್ಥೆಗಳಿಗೆ 6 ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ವರ್ಷಪೂರ್ತಿ ನಡೆಸುವ ಸಾಂಸ್ಕೃತಿಕ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ಅನುದಾನವನ್ನು ನೀಡುತ್ತಿದ್ದೇವೆ. ಕೆಲವು ಸಂಘ-ಸಂಸ್ಥೆಗಳು ಈಗ ನೀಡುತ್ತಿರುವ ಅನುದಾನ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಸಾಕಾಗುತ್ತಿಲ್ಲ ಎಂದು ಮನವಿ ಮಾಡಿದ್ದಾರೆ. ಹಣಕಾಸಿನ ಲಭ್ಯತೆ ನೋಡಿಕೊಂಡು ನಾವು ತೀರ್ಮಾನಿಸುತ್ತೇವೆ ಎಂದರು.
ಈ ಬಾರಿ ನಮ್ಮ ಇಲಾಖೆಗೆ ನೀಡುತ್ತಿರುವ ಅನುದಾನದ ಪ್ರಮಾಣವನ್ನು ಹೆಚ್ಚಳ ಮಾಡಬೇಕೆಂದು ಸಿಎಂಗೆ ಮನವಿ ಮಾಡಲಾಗುವುದು. ಕಲಾವಿದರಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.
ಹೆಚ್ಚಿನ ಅನುದಾನ ನೀಡಲು ಸ್ಪೀಕರ್ ಸಲಹೆ: ಮಧ್ಯ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕೊರೊನಾ ಸಂಕಷ್ಟದಿಂದ ಕಲಾವಿದರ ಬದುಕು ತುಂಬಾ ದಯನೀಯ ಸ್ಥಿತಿ ತಲುಪಿದೆ. ಕಲಾವಿದರು ನಮ್ಮ ಸಂಸ್ಕೃತಿ ಮತ್ತು ಸಮೃದ್ಧಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತಾರೆ. ಅವರಿಗೆ ಹೆಚ್ಚಿನ ಅನುದಾನ ನೀಡಿ ಎಂದು ಸಲಹೆ ಮಾಡಿದರು.
ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಕಲಾವಿದರು ಹಾಗೂ ಸಂಘ - ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ನೀಡಲಾಗುವುದು. ಸಂಘ - ಸಂಸ್ಥೆಗೆ ಅನುದಾನ ನೀಡಲು ಸಮಿತಿ ರಚಿಸಲಾಗಿದೆ. ಯಾವುದಾದರೂ ನಿರ್ದಿಷ್ಟ ಸಂಘ - ಸಂಸ್ಥೆಗಳಿಗೆ ಅನುದಾನ ಬಿಟ್ಟು ಹೋಗಿದ್ದರೆ ಸಮಿತಿ ಮುಂದೆ ಪರಿಶೀಲಿಸುವುದಾಗಿ ಹೇಳಿದರು.
ಶಾಶ್ವತ ಅನುದಾನಕ್ಕೆ ಹಣಕಾಸು ಸಮಸ್ಯೆ: ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಒಟ್ಟು 2,712 ರಂಗಭೂಮಿ, ಜನಪದ, ನೃತ್ಯ, ಸಂಗೀತ ಕಲಾವಿದರಿದ್ದಾರೆ. ನಾಟಕ, ಜನಪದ ಸಂಗೀತ, ಸುಗಮ ಸಂಗೀತ ಮುಂತಾದ ಕಾರ್ಯಕ್ರಮಗಳನ್ನು ನೀಡಿ ಗೌರವ ಸಂಭಾವನೆ ಕೊಡುತ್ತಿದ್ದೇವೆ.
ರಾಜ್ಯ ಮತ್ತು ಅಕಾಡೆಮಿಯಿಂದ ಪ್ರಶಸ್ತಿ ಪಡೆದ ಕಲಾವಿದರಿಗೆ ವೈದ್ಯಕೀಯ ವೆಚ್ಚ ಮರುಪಾವತಿ, ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು ಪ್ರೋತ್ಸಾಹ ನೀಡುತ್ತಿದ್ದೇವೆ. ಆದರೆ, ಇವರಿಗೆ ಶಾಶ್ವತವಾಗಿ ಅನುದಾನ ನೀಡಲು ಹಣಕಾಸಿನ ಸಮಸ್ಯೆ ಎದುರಾಗಿದೆ ಎಂದು ಸಚಿವರು ತಿಳಿಸಿದರು. ರಂಗಕಲಾವಿದರನ್ನು ನೇಮಕ ಮಾಡುವ ಸಂಬಂಧ ಶಿಕ್ಷಣ ಹಾಗೂ ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆ 3 ತಿಂಗಳೊಳಗೆ ಪೂರ್ಣ: ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಮಲೀಯೂರು ಮತ್ತು ತಲಕಾಡು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು 3 ತಿಂಗಳೊಳಗೆ ಸಾರ್ವಜನಿಕರಿಗೆ ಸಮರ್ಪಣೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ವಿಧಾನಸಭೆಗೆ ತಿಳಿಸಿದರು.
ಜೆಡಿಎಸ್ ಶಾಸಕ ಅಶ್ವಿನ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಕಟ್ಟಡದ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಆದರೆ, ಆಸ್ಪತ್ರೆಯಲ್ಲಿ ಸಿಬ್ಬಂದಿ ಮತ್ತು ಯಂತ್ರೋಪಕರಣಗಳ ಕೊರತೆ ಎದುರಾಗಿರುವುದರಿಂದ ವಿಳಂಬವಾಗಿದ್ದು, 3 ತಿಂಗಳೊಳಗೆ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದರು.
ಈ ಹಿಂದೆ ಸರ್ಕಾರಗಳು ಕೇವಲ ಆಸ್ಪತ್ರೆ ಕಟ್ಟಡಗಳನ್ನು ನಿರ್ಮಿಸಿ ಯಂತ್ರೋಪಕರಣ, ಇಲ್ಲವೇ ಸಿಬ್ಬಂದಿಯನ್ನು ನೇಮಕ ಮಾಡುತ್ತಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಕಟ್ಟಡದ ಕಾಮಗಾರಿ ಜತೆಗೆ ಯಂತ್ರೋಪಕರಣ ಮತ್ತು ಸಿಬ್ಬಂದಿ ನೇಮಕಾತಿಗೂ ಆದ್ಯತೆ ಕೊಟ್ಟಿದೆ. ಆಸ್ಪತ್ರೆಗೆ ಅಗತ್ಯವಿರುವ ಯಂತ್ರೋಪಕರಣಗಳನ್ನು ಖರೀದಿಸಲು ಕೆಎಸ್‍ಎಂಎಸ್‍ಸಿಎಲ್ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.
ಶಾಸಕರ ಕೋರಿಕೆಯಂತೆ ಈ ಆಸ್ಪತ್ರೆಗೆ ಪ್ರಸೂತಿ ತಜ್ಞರು, ಅರವಳಿಕೆ ತಜ್ಞರು, ಸಿಎಂಒ, ಶುಶ್ರೂಕರು, ಫಾರ್ಮಸಿಸ್ಟ್, ಪ್ರಯೋಗಶಾಲೆ ತಜ್ಞರು, ಗಣಕಯಮತ್ರ ತಜ್ಞರು ಹಾಗೂ ಗ್ರೂಪ್ ಡಿ ನೌಕರರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಾಸನ ಜಿಲ್ಲೆ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಓದಿ: ಪರಿಷತ್ನಲ್ಲಿ ಮುಂದುವರೆದ ಕಾಂಗ್ರೆಸ್ ಧರಣಿ: ಕಲಾಪ ಮಧ್ಯಾಹ್ನಕ್ಕೆ ಮುಂದೂಡಿಕೆ