ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ನಿಗಾ, ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಕೊರೊನಾ ಸೋಂಕಿನ ಮೇಲೆ ಗಮನ, ಐಸೊಲೇಟ್ ಆದವರಿಗೆ ದೂರವಾಣಿ ಕರೆ ಮಾಡಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಪಾಸಿಟಿವ್ ಆದವರ ಮನೆಗಳಿಗೆ ಔಷಧ ಕಿಟ್ ತಲುಪಿಸುವ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಆರ್.ಟಿ ನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಸಿಟಿವ್ ಬಂದು ಹೋಂ ಐಸೋಲೇಷನ್ ಆಗಿರುವವರ ಮೇಲೆ ಹೆಚ್ಚು ನಿಗಾ ಇಡಿ, ಅವರಿಗೆ ಹೆಚ್ಚಿನ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿ, ವಾರದಲ್ಲಿ ಎರಡರಿಂದ ಐದು ಬಾರಿ ದೂರವಾಣಿ ಕರೆ ಮಾಡಿ ಐಸೊಲೇಟ್ ನಲ್ಲಿರವವರಿಗೆ ಮಾರ್ಗದರ್ಶನ ಮಾಡಲು ಸಿಎಂ ಸಲಹೆ ನೀಡಿದ್ದಾರೆ ಎಂದರು.
ಮನೆಗೇ ಔಷಧ ಕಿಟ್ ವಿತರಣೆ..
ಪಾಸಿಟಿವ್ ಆಗಿ ಮನೆಗಳಲ್ಲಿ ಐಸೋಲೇಷನ್ನಲ್ಲಿ ಇರುವವರಿಗೆ ಔಷಧಿ ಕಿಟ್ಗಳನ್ನು ಕಡ್ಡಾಯವಾಗಿ ಕೊಡುವ ವ್ಯವಸ್ಥೆ ಆದಷ್ಟು ಶೀಘ್ರದಲ್ಲಿ ಪ್ರಾರಂಭಿಸಲು ಸಿಎಂ ಸೂಚಿಸಿದ್ದು, ಕೂಡಲೇ ಆರೋಗ್ಯ ಇಲಾಖೆಯಿಂದಲೇ ಮನೆಗಳಿಗೆ ಕೋವಿಡ್ ಔಷಧಿಗಳ ಕಿಟ್ ಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಎರಡನೇ ಡೋಸ್ಗೆ ಉತ್ತೇಜನ..
ರಾಜ್ಯದಲ್ಲಿ ಇನ್ನೂ 40 ಲಕ್ಷ ಜನರಿಗೆ ನಾವು ಕೊರೊನಾ ಲಸಿಕೆಯ ಎರಡನೇ ಡೋಸ್ ಕೊಡಬೇಕಿದೆ. 8-9 ಜಿಲ್ಲೆಗಳಲ್ಲಿ ಲಸಿಕಾಕರಣ ಕಡಿಮೆಯಾಗಿದೆ. ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿ ಹೆಚ್ಚು ಕ್ರಿಯಾಶೀಲತೆಯಾಗಿ ಕೆಲಸ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ಕೊಡಲು ನಿರ್ಧರಿಸಲಾಗಿದೆ. 15 ರಿಂದ 17 ವರ್ಷದ ಮಕ್ಕಳಿಗೆ ಕೊಡುತ್ತಿರುವ ಲಸಿಕೆ ಶೇಕಡಾ 62ರಷ್ಟು ಆಗಿದೆ. ಬಾಕಿ ಇರುವ ಮಕ್ಕಳಿಗೂ ಕೂಡ ಶೀಘ್ರದಲ್ಲೇ ಲಸಿಕೆ ನೀಡಲಾಗುವುದು ಎಂದು ವಿವರಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ, ನಿಗಾ..
ಗ್ರಾಮೀಣ ಪ್ರದೇಶದಲ್ಲಿ ಯಾವ ಯಾವ ಭಾಗದಲ್ಲಿ ಸೋಂಕು ಹೆಚ್ಚಾಗುತ್ತಿದೆಯೋ ಅದರ ಬಗ್ಗೆ ಹೆಚ್ಚಿನ ನಿಗಾ ಇರಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಎಂ ಸೂಚಿಸಿದ್ದಾರೆ. ಮಾಸ್ಕ್ ಧರಿಸಲು ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕು ಮತ್ತು ಕೊರೊನಾ ನಿಯಂತ್ರಿಸಲು ಯಾವ ರೀತಿ ನಿಯಮ ಪಾಲಿಸಬೇಕು ಎಂದು ಜಾಗೃತಿ ಮೂಡಿಸಲು ಹೆಚ್ಚು ಒತ್ತು ನೀಡುವಂತೆ ಸೂಚಿಸಿದ್ದಾರೆ. ಮುಖ್ಯಮಂತ್ರಿಗಳ ನಾಯಕತ್ವದಲ್ಲಿ ಅದಕ್ಕೆ ದೊಡ್ಡ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಮಕ್ಕಳ ಮೇಲೆ ನಿಗಾ..
ಮಕ್ಕಳ ವಿಚಾರದಲ್ಲಿ ನಾವು ವಿಶೇಷವಾಗಿ ಗಮನ ಇಟ್ಟಿದ್ದೇವೆ. 17 ವರ್ಷದ ಒಳಗಿನ ಎಷ್ಟು ಮಕ್ಕಳಿಗೆ ಸೋಂಕು ಬಂದಿದೆ ಎಂದು ಗಮನ ಹರಿಸಲಾಗಿದೆ. ಮಕ್ಕಳ ಮೇಲೆ ನಿಗಾ ಇರಿಸುವ ಕೆಲಸವನ್ನು ನಾವು ಮುಂದುವರೆದಿದ್ದೇವೆ. ಈ ಶುಕ್ರವಾರದವರೆಗೆ ಎಲ್ಲವನ್ನು ಗಮನಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಮತ್ತೆ ಶುಕ್ರವಾರ ಮತ್ತೆ ಸಭೆ ಸೇರಲಿದ್ದೇವೆ. ಮುಂದಿನ ಕ್ರಮಗಳನ್ನು ಯಾವ ರೀತಿ ತೆಗೆದುಕೊಳ್ಳಬೇಕು ಎಂದು ಸ್ಪಷ್ಟ ಚಿತ್ರಣ ನಮ್ಮ ಮುಂದಿರಲಿದೆ, ಅದರಂತೆ ನಿರ್ಧರಿಸುತ್ತೇವೆ ಎಂದರು.
ಸಿದ್ಧತೆಗೆ ಸಿಎಂ ಮೆಚ್ಚುಗೆ..
ಇಂದಿನ ಸಭೆಯಲ್ಲಿ ಆರೋಗ್ಯ ಇಲಾಖೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಮುಖ್ಯಮಂತ್ರಿಗಳು ಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಆರೋಗ್ಯ ಇಲಾಖೆಯಲ್ಲಿ ಆರೋಗ್ಯ ವ್ಯವಸ್ಥೆಗಳ ಬಗ್ಗೆ ಏನೇನು ಸಿದ್ಧತೆ ಮಾಡಿಕೊಳ್ಳಲಾಗಿದೆ, ಮುಂದೆ ಯಾವ ರೀತಿ ಈ ಸೋಂಕು ನಿಯಂತ್ರಣ ಮಾಡಬೇಕು? ಯಾವ ರೀತಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕು? ಜನರಿಗೆ ಯಾವ ರೀತಿಯ ಚಿಕಿತ್ಸೆ ನೀಡಬೇಕು? ಎನ್ನುವ ಕುರಿತು ಚರ್ಚೆ ನಡೆಸಲಾಗಿದೆ. ಎಲ್ಲದರ ಬಗ್ಗೆಯೂ ಮುಖ್ಯಮಂತ್ರಿಗಳಿಂದ ಸಲಹೆ ಸೂಚನೆ ಮಾರ್ಗದರ್ಶನ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಶುಕ್ರವಾರದವರೆಗೂ ಕಠಿಣ ನಿಯಮ ಮುಂದುವರಿಕೆ: ಸಿಎಂ ಸಭೆಯ ಮಹತ್ವದ ನಿರ್ಧಾರಗಳಿವು..