ಬೆಂಗಳೂರು: ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಬಗ್ಗೆ ಅಲ್ಖೈದಾ ಉಗ್ರ ಸಂಘಟನೆಯ ಬೆಂಬಲ ವಿಚಾರವಾಗಿ ಸಚಿವ ಡಾ. ಕೆ.ಸುಧಾಕರ್ ಪ್ರಕ್ರಿಯಿಸಿ, ಮುಸ್ಕಾನ್ ಮುಗ್ಧ ಹುಡುಗಿ. ಆದರೆ, ಜನರ ಮುಗ್ಧತೆಯನ್ನು ಅಸ್ತ್ರವನ್ನಾಗಿ ಅಲ್ಖೈದಾ ಭಯೋತ್ಪಾದಕರು ಬಳಸುತ್ತಾರೆ. ಇಂತಹ ಭಯೋತ್ಪಾದಕ ಸಂಘಟನೆಗಳಿಂದ ಹೆಚ್ಚು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಆರೋಗ್ಯಸೌಧದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಭಯೋತ್ಪಾದಕರಿಂದ ಜನರಲ್ಲಿ ಭಯ ಹುಟ್ಟಿಸಲಷ್ಟೇ ಸಾಧ್ಯ. ದುರದೃಷ್ಟವಶಾತ್ ಮುಸ್ಕಾನ್ ಯಾಕೆ ಈ ರೀತಿ ಹೇಳಿಕೆ ಕೊಟ್ಟಳು ಎನ್ನುವುದು ಗೊತ್ತಿಲ್ಲ. ನಾವು, ಯಾವತ್ತು ಕಾನೂನು ಪಾಲನೆ ಮಾಡಬೇಕು. ನೆಲದ ಕಾನೂನನ್ನು ಗೌರಿಸಬೇಕೆಂದರು.
ಜೀವನದಲ್ಲಿ ಶಿಸ್ತು ಮುಖ್ಯ. ಭಾಷೆ, ಧರ್ಮ ಬದಿಗಿಟ್ಟು ಶಿಕ್ಷಣಕ್ಕೆ ಗೌರವ ನೀಡಬೇಕು. ಎಲ್ಲದರಲ್ಲೂ ಒಗ್ಗಟ್ಟಿರಬೇಕು. ಧರ್ಮ, ಭಾಷೆ ಭಿನ್ನತೆ ನಡುವೆಯೂ ಏಕತೆ ಇರಬೇಕು. ನನಗೆ ಯಾವ ಧರ್ಮವನ್ನೂ ಟಾರ್ಗೆಟ್ ಮಾಡಲು ಇಷ್ಟವಿಲ್ಲ. ನಾನೊಬ್ಬ ಸೆಕ್ಯೂಲರ್ ರಾಜಕಾರಣಿ. ಪ್ರತಿಯೊಬ್ಬರಿಗೂ ಅವರ ನಂಬಿಕೆಯನ್ನು ಆಚರಿಸಲು ಸಂವಿಧಾನ ಅವಕಾಶ ಕೊಟ್ಟಿದೆ ಎಂದರು.
ಧ್ವನಿವರ್ಧಕಗಳ ಕುರಿತು ಸ್ಪಷ್ಟ ಸೂಚನೆ: ಮಸೀದಿಗಳ ಧ್ವನಿವರ್ಧಕಗಳ ವಿಚಾರವಾಗಿ ಮಾತನಾಡಿದ ಸುಧಾಕರ್, ಧ್ವನಿವರ್ಧಕದ ವಿಚಾರವಾಗಿ ಈಗಾಗಲೇ ಕಾನೂನುಗಳಿವೆ. ಕೆಲ ವರ್ಷಗಳ ಹಿಂದೆಯೇ ಸುಪ್ರೀಂಕೋರ್ಟ್ ಈ ವಿಚಾರದಲ್ಲಿ ಸ್ಪಷ್ಟ ಸೂಚನೆ ಕೊಟ್ಟಿದೆ. ಆರೋಗ್ಯದ ಮೇಲೆ ಧ್ವನಿ ಮಾಲಿನ್ಯ ಕೂಡ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆ ಜೊತೆ ಸಂಪರ್ಕ: ಭಾರತದಲ್ಲಿ ಎಕ್ಸ್ಇ ವೆರಿಯಂಟ್ ಪತ್ತೆ ವಿಚಾರವಾಗಿ ಸಚಿವರು ಮಾತನಾಡಿ, ವೈರಸ್ ಮ್ಯೂಟೆಷನ್ ಆಗುತ್ತಾ ಇರುತ್ತೆ. ಅದರ ಗುಣವೇ ಹಾಗೆ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಇದೆಲ್ಲದರ ವಸ್ತು ಸ್ಥಿತಿಯ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ವಿಧಾನಸೌಧದಲ್ಲಿ ಶಾಸಕರ ಕಾರಿಗೆ ದಂಡ ವಿಧಿಸಿದ ಆರ್ಟಿಒ ಅಧಿಕಾರಿಗಳು!