ಬೆಂಗಳೂರು : ರಾಜ್ಯದಲ್ಲಿ ಒಮಿಕ್ರಾನ್ ಸೋಂಕು ಪತ್ತೆ ಬೆನ್ನಲ್ಲೇ ಆರೋಗ್ಯ ಸಚಿವರಿಂದ ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ. ಆರೋಗ್ಯ ಸೌಧದಲ್ಲಿಂದು ಸಚಿವ ಸುಧಾಕರ್ ನೇತೃತ್ವದಲ್ಲಿ ಒಮಿಕ್ರಾನ್ ನಿಯಂತ್ರಣ ಕುರಿತು ಮೆಡಿಕಲ್ ಕಾಲೇಜುಗಳ ನಿರ್ದೇಶಕರ ಜತೆಗೆ ಸಭೆ ನಡೆಸಲಾಯ್ತು. ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆದ ಸಭೆಯಲ್ಲಿ ರಾಜ್ಯದ 21 ಮೆಡಿಕಲ್ ಕಾಲೇಜು ನಿರ್ದೇಶಕರು ಭಾಗಿಯಾಗಿದ್ದರು.
ಕೊರೊನಾ ಹೊಸ ಪ್ರಭೇದ ಬರ್ತಿದೆ : ಚರ್ಚೆ ಬಳಿಕ ಮಾತಾನಾಡಿದ ಸಚಿವ ಸುಧಾಕರ್, ಒಮಿಕ್ರಾನ್ ಸಂಬಂಧ ಸಿಎಂ ಜೊತೆಗೆ ಸಭೆ ಕರೆಯಲಾಗಿದ್ದು, ಮುಂಜಾಗ್ರತಾ ಕ್ರಮದ ಕುರಿತು ಇನ್ನುಷ್ಟು ಚರ್ಚೆ ಮಾಡಲಾಗುತ್ತೆ. ಇಂದು ವೈದ್ಯಕೀಯ ಶಿಕ್ಷಣ ಇಲಾಖೆ ಸಭೆ ನಡೆಸಿದ್ದೇನೆ.
21 ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಲಹೆ-ಸೂಚನೆ ನೀಡಿದ್ದೇವೆ. ಕೊರೊನಾ ಹೊಸ ಪ್ರಭೇದ ಬರ್ತಾ ಇದೆ. ಎರಡು ಕೇಸ್ ಪತ್ತೆ ಆಗಿವೆ. ಐದು ಕೇಸ್ ಪಾಸಿಟಿವ್ ಪ್ರಕರಣಗಳಿವೆ. ಅವುಗಳನ್ನು ಜಿನೋಮಿನ್ ಸೀಕ್ವೆನ್ಸ್ಗೆ ಕಳಿಸಿದ್ದೇವೆ.
ಮೂರನೇ ಅಲೆಗೆ ಅಥವಾ ಒಮಿಕ್ರಾನ್ ವೈರಸ್ಗೆ ಮುಂಬರುವ ದಿನಗಳಲ್ಲಿ ಸಿದ್ದತೆ ಮಾಡಿಕೊಳ್ಳಬೇಕಿದೆ. ಮೆಡಿಕಲ್ ಕಾಲೇಜು ಮುಖ್ಯವಾಗಿದೆ. ಹೀಗಾಗಿ, ಒಂದು ಸಭೆ ಮಾಡಲಾಗಿದೆ. ಹೆಚ್ಒಡಿ, ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್ ಕಡ್ಡಾಯವಾಗಿ ಜವಾಬ್ದಾರಿಯಿಂದ ವರ್ತಿಸಬೇಕು. ಪೋಸ್ಟ್ ಗ್ರ್ಯಾಜುಯೇಟ್ ವಿದ್ಯಾರ್ಥಿಗಳೊಂದಿಗೆ ಸೇರಿ ಪರಿಣಾಮಕಾರಿ ಚಿಕಿತ್ಸೆ ನೀಡಬೇಕು ಎಂದರು.
ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ತರಬೇತಿ : ನರ್ಸಿಂಗ್ ಸಂಖ್ಯೆ ಹೆಚ್ಚು ಮಾಡಲು ತೀರ್ಮಾನ ಮಾಡಲಾಗಿದೆ. ಪ್ಯಾರಾ ಮೆಡಿಕಲ್ ಸ್ಟಡಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಟ್ರೈನಿಂಗ್ ನೀಡಲು ಹೇಳಿದ್ದೇವೆ. 18 ಸಾವಿರ ಜನ ವಿದ್ಯಾರ್ಥಿಗಳಿದ್ದಾರೆ. ಅವರನ್ನೂ ಇದಕ್ಕೆ ಬಳಕೆ ಮಾಡಲು ಸಿದ್ದತೆ ಮಾಡುತ್ತಿದ್ದೇವೆ. ಇನ್ನು ಐಸಿಯು ಸಿದ್ದತೆಗಳು ಹಾಗೂ ಉಪಕರಣ ಖರೀದಿ ಬಗ್ಗೆ ಮಾಹಿತಿ ಪಡೆದಿದ್ದೇನೆ. ವೈದ್ಯಕೀಯ ಕಾಲೇಜುಗಳು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
ರೆಸಿಡೆಂಟ್ ವೈದ್ಯರ ಮುಷ್ಕರ ವಾಪಸ್ : ನಿವಾಸಿ ವೈದ್ಯರಿಗೆ ಕೋವಿಡ್ ರಿಸ್ಕ್ ಅಲೋಯೆನ್ಸ್ ಆಗಿರಲಿಲ್ಲ. ಅದನ್ನು ನಿನ್ನೆ ಕೊಡಲು ತಿಳಿಸಲಾಗಿದೆ. 73 ಕೋಟಿ ರೂ. ಹಣ ಬೇಕಿತ್ತು, ಅದನ್ನು ಕೊಡಲು ತಿಳಿಸಿದ್ದೇನೆ. ತಾಂತ್ರಿಕ ಸಮಸ್ಯೆ ಕಾರಣದಿಂದಾಗಿ ಹೆಚ್ಆರ್ಎಂಎಸ್ ತೊಂದರೆ ಇತ್ತು. ಹೀಗಾಗಿ, ಅವ್ರಿಗೆ ವೇತನ ಪಾವತಿ ತಡವಾಗುತ್ತಿತ್ತು. ಅದಕ್ಕೆ ಇನ್ನೊಂದು ವಾರದೊಳಗೆ ಎಲ್ಲಾ ಸಿದ್ದತೆಗಳು ಆಗಲಿವೆ ಅಂದರು.
ಪ್ರತ್ಯೇಕ ಹಾಸಿಗೆ ಮೀಸಲು : ಇನ್ನು ಎಷ್ಟು ಹಾಸಿಗೆ ಮೀಸಲು ಇಡಬೇಕು ಎಂಬುದರ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಡೆಲ್ಟಾ ಕೇಸ್ ಬಂದಾಗ ಅವರನ್ನು ಒಮಿಕ್ರಾನ್ ಸೋಂಕಿತರ ಜೊತೆ ಟ್ರೀಟ್ಮೆಂಟ್ ಕೊಡಬೇಕೋ ಬೇಡ್ವೋ ಅನ್ನೋದು ಚರ್ಚೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ತಜ್ಞರ ಅಭಿಪ್ರಾಯ ಕೇಳಿ ತೀರ್ಮಾನ ಮಾಡಲಾಗುವುದು ಅಂದರು.