ಬೆಂಗಳೂರು: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಇಂದು ಬೆಳಗ್ಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಕೆಲಕಾಲ ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಟಿ. ಸೋಮಶೇಖರ್, ಕೊರೊನಾ ಎರಡನೇ ಅಲೆ ಬಗ್ಗೆ ಭಯ ಪಡಬೇಕಾದ ಅಗತ್ಯವಿಲ್ಲ. ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆ ಮಾಡಬೇಕು. ಜೊತೆಗೆ ಕೇಂದ್ರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇನ್ನೂ ನಾಲ್ಕೈದು ತಿಂಗಳು ಜಾಗ್ರತೆಯಿಂದ ಇರಬೇಕು ಎಂದು ಹೇಳಿದರು.
ಡಿಸೆಂಬರ್ 25 ರಂದು ವಾಜಪೇಯಿ ಅವರ ಹುಟ್ಟುಹಬ್ಬ, ಅಂದು ರೈತರ ದಿನವನ್ನಾಗಿ ನಾವು ಆಚರಿಸುತ್ತಿದ್ದೇವೆ. ಅಂದು ಎಲ್ಲಾ ಜಿಲ್ಲೆಗಳಲ್ಲಿ ಸುದ್ದಿಗೋಷ್ಠಿ ನಡೆಸಿ, ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಏನೆಲ್ಲಾ ಉಪಯೋಗವಾಗಲಿದೆ ಎಂಬ ಬಗ್ಗೆ ತಿಳುವಳಿಕೆ ಮೂಡಿಸಲಾಗುವುದು. ಜೊತೆಗೆ ಇದು ಹೇಗೆ ರೈತರಿಗೆ ಉಪಕಾರಿ ಎನ್ನುವುದನ್ನು ಮನದಟ್ಟು ಮಾಡಲಾಗುವುದು.
ಎಪಿಎಂಸಿ ಕಾಯ್ದೆಯಿಂದ ಯಾರಿಗೂ ತೊಂದರೆಯಾಗದು. ಎಪಿಎಂಸಿಯನ್ನು ಇನ್ನು ಮೇಲ್ದರ್ಜೆಗೇರಿಸುವ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ. ಇದಕ್ಕಾಗಿ ನಬಾರ್ಡ್ 205 ಕೋಟಿ ರೂಪಾಯಿ ಅನುದಾನ ನೀಡಿದೆ. ಅಲ್ಲದೆ, 35 ಪೈಸೆಗೆ ಇಳಿಸಿದ್ದ ಸೆಸ್ ಅನ್ನು ವರ್ತಕರು ಹಾಗೂ ಪ್ರತಿಪಕ್ಷಗಳ ಆಗ್ರಹದ ಮೇರೆಗೆ 1 ರೂಪಾಯಿಗೆ ಏರಿಸಿ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಂಡಿದ್ದಾರೆ. ಹೀಗಾಗಿ ಆದಾಯದಲ್ಲಿ ನಷ್ಟ ಎಂಬ ಮಾತು ಬಾರದು ಎಂದು ಸಚಿವರು ತಿಳಿಸಿದರು.
ಮೈಸೂರು ಡಿಸಿ ವರ್ಗಾವಣೆಗೆ ಸಂಬಂಧಿಸಿದಂತೆ ಉತ್ತರಿಸಿದ ಸಚಿವರು, ಹಾಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ವರ್ಗಾವಣೆ ಪ್ರಕರಣ ಕೋರ್ಟ್ನಲ್ಲಿರುವುದರಿಂದ ಈ ಸಂದರ್ಭದಲ್ಲಿ ನಾನು ಏನೂ ಹೇಳಲಾಗದು ಎಂದರು.
'ಎಲ್ಲರೂ ಸರ್ಕಾರದ ಆದೇಶ ಪಾಲಿಸಬೇಕು'
ಸಚಿವರ ಮಾತುಗಳನ್ನು ಜಿಲ್ಲಾಧಿಕಾರಿಗಳು ಕೇಳುತ್ತಿಲ್ಲ ಎಂಬ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು, ಇಲ್ಲಿ ಸೋಮಶೇಖರ್ ಹೇಳುತ್ತಿದ್ದಾರೆ ಅಥವಾ ಇನ್ನಾವುದೇ ಸಚಿವರು ಹೇಳುತ್ತಿದ್ದಾರೆಂದರೆ ಅದು ವೈಯುಕ್ತಿಕ ಹೇಳಿಕೆಯಲ್ಲ, ಸರ್ಕಾರದ ಆದೇಶ. ಅದನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ಭಗವಂತ ಕಾಲಭೈರವನು ಕೊರೊನಾದಿಂದ ಜಗತ್ತನ್ನು ಕಾಪಾಡಲಿ. ನಾಡಿನ ಸಮಸ್ತ ಜನತೆ ಸುಭಿಕ್ಷವಾಗಿರಲಿ ಎಂದು ಆಶೀರ್ವದಿಸಿದರು. ಬೆಂಗಳೂರಿನಲ್ಲಿರುವ ಸ್ಲಂ ಮಕ್ಕಳಿಗೆ ಉಚಿತ ಶಿಕ್ಷಣ ಸಿಗಬೇಕಿದೆ. ಈ ಕೆಲಸವನ್ನು ಮಠದಿಂದ ಮಾಡಲಾಗುವುದು. ಸರ್ಕಾರದಿಂದ ಸ್ಥಳ ಒದಗಿಸುವ ಕೆಲಸ ಆಗಬೇಕು ಎಂದು ಹೇಳಿದರು.