ಬೆಂಗಳೂರು : ಮುಷ್ಕರ ನಿರತರಾಗಿದ್ದ ಸಾರಿಗೆ ನೌಕರರ ಮೇಲೆ ದಾಖಲಿಸಲಾದ ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಪಡಿಸಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ವಿಧಾನಸಭೆ ಕಲಾಪದಲ್ಲಿ ತಿಳಿಸಿದರು.
ಶೂನ್ಯವೇಳೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಾರಿಗೆ ಮುಷ್ಕರ ಸಂದರ್ಭದಲ್ಲಿ ಸಾರಿಗೆ ನೌಕರರ ಮೇಲೆ ದಾಖಲಿಸಲಾದ ಪ್ರಕರಣಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದರು. ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದವರ ಹೊರತಾಗಿ ಇತರರ ವಿರುದ್ಧದ ಶಿಸ್ತು ಕ್ರಮ ವಾಪಸ್ ಪಡೆದುಕೊಳ್ಳಲು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಾರಿಗೆ ಸಚಿವರು, ಸಾರಿಗೆ ಮುಷ್ಕರ ಸಂದರ್ಭದಲ್ಲಿ ಒಟ್ಟು 6,440 ಪ್ರಕರಣ ದಾಖಲಾಗಿದ್ದವು. ನೌಕರರ ಯೂನಿಯನ್ ಜೊತೆ ಮಾತುಕತೆ ಬಳಿಕ ಸಿಎಂ ಜೊತೆಗೂ ಚರ್ಚಿಸಿದ್ದೇನೆ. ಪರಿಶೀಲನೆ ನಡೆಸಿ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ನಾಲ್ಕು ನಿಗಮದ ಎಂಡಿಗಳ ಜೊತೆ ಮತನಾಡಿ 4,340 ಪ್ರಕರಣ ಇತ್ಯರ್ಥಗೊಳಿಸಲಾಗಿದೆ. ಇನ್ನು, 2,100 ಪ್ರಕರಣ ಬಾಕಿ ಇದೆ. ಇದನ್ನು ಶೀಘ್ರವಾಗಿ ಇತ್ಯರ್ಥ ಮಾಡುವುದಾಗಿ ಭರವಸೆ ಕೊಟ್ಟರು.