ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರೂ ನಿರುದ್ಯೋಗಿಗಳು. ಅವರಿಬ್ಬರು ರೈತರನ್ನು ಎತ್ತಿ ಕಟ್ಟುತ್ತಿದ್ದಾರೆ. ಅವರ ಬಗ್ಗೆ ರೈತರು ಎಚ್ಚರದಿಂದಿರಿ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಹೆಸರಿನಲ್ಲಿ ಹೋರಾಟ ಮಾಡುತ್ತಿರುವುದು ಕಾಂಗ್ರೆಸ್ ಪಿತೂರಿ. ಇದು ಕಾಂಗ್ರೆಸ್ ಬೆಂಬಲಿತ ಹೋರಾಟ ಎಂದು ದೂರಿದರು.
ಗುಜರಾತ್ ಮತ್ತು ತಮಿಳುನಾಡು ಮಾದರಿಯಲ್ಲಿ ಕೃಷಿ ರಫ್ತು ಹೆಚ್ಚಳಕ್ಕೆ ಭೂ ಸುಧಾರಣೆ ಕಾಯಿದೆಯಿಂದ ನೆರವಾಗಲಿದೆ. ಕಾಯಿದೆಯ ಪ್ರಕಾರ, ಮೂರು ಬಾರಿ ತಿದ್ದುಪಡಿಯಾಗಿದೆ. ಈ ಮೂರು ಬಾರಿ ತಿದ್ದುಪಡಿ ಮಾಡಿರುವುದು ಸಹ ಕಾಂಗ್ರೆಸ್ನವರೇ. ಭೂ ಸುಧಾರಣೆ ಕಾಯಿದೆಯಲ್ಲಿ 13 ಎಕರೆ ಕೊಂಡುಕೊಳ್ಳುವ ಅವಕಾಶ ಇದೆ. 13 ಎಕರೆ ಕೊಳ್ಳಲು ಯಾವ ಬಹುರಾಷ್ಟ್ರೀಯ ಕಂಪನಿಯಾಗಲಿ, ದೊಡ್ಡ ಕುಳಗಳಾಗಲಿ ಮುಂದೆ ಬರುವುದಿಲ್ಲ. ಹಾಗೆಯೇ ನೀರಾವರಿ ಜಮೀನಿನಲ್ಲಿ ಬೇರೆ ರೀತಿಯ ಚಟುವಟಿಕೆ ಮಾಡುವುದಿಲ್ಲ. ದಲಿತರ ಜಮೀನನ್ನು ಯಾರೂ ತೆಗೆದುಕೊಳ್ಳುವ ಅವಕಾಶ ಇಲ್ಲ. ಉಳುವವನೇ ಭೂಮಿಯ ಒಡೆಯ, ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ ಎಂದರು.
ವಿನಾಕಾರಣ ಸಿದ್ದರಾಮಯ್ಯ ರೈತರ ದಾರಿ ತಪ್ಪಿಸೋದು ಬೇಡ. ಕಾಯಿದೆಯ ಪ್ರಕಾರ ಇಲ್ಲಿಯವರೆಗೂ ರೈತ ತನ್ನದೇ ಜಮೀನನ್ನು ಮಾರಾಟ ಮಾಡುವ ಹಾಗಿರಲಿಲ್ಲ. ಆದರೆ ಈಗ ಅವನ ಸ್ವಂತ ಜಮೀನನ್ನು ಅವನು ಮಾರಾಟ ಮಾಡುವ ಸ್ವಾತಂತ್ರ್ಯ ಸಿಕ್ಕಿದೆ. ಮಧ್ಯವರ್ತಿಗಳ ಕಾಟ ಇಲ್ಲದೆ ಆತ ಜಮೀನು ಮಾರಾಟ ಮಾಡಬಹುದು ಎಂದು ವಿವರಿಸಿದರು.
ಓದಿ: ರಾಜ್ಯದಲ್ಲಿ ಗೋ ಹತ್ಯೆ ಆಗಲು ಬಿಡಲ್ಲ, ಮೂಕ ಪ್ರಾಣಿಗಳ ರಕ್ಷಣೆಗೆ ಸರ್ಕಾರ ಸದಾ ಸಿದ್ಧ: ಪ್ರಭು ಚೌವ್ಹಾಣ್
ರೈತ ಯುವಕರು ಯಾರೂ ಭೂಮಿ ಮಾರಾಟ ಮಾಡುವುದಿಲ್ಲ. ಬೇರೆ ಬೇರೆ ದೇಶದಲ್ಲಿ ಕೃಷಿ, ಕೈಗಾರಿಕೆ ಒಟ್ಟಿಗೆ ಹೋಗುತ್ತಿವೆ. ಆಯಾ ಉತ್ಪನ್ನ ಸಿಗುವ ಸ್ಥಳಗಳಲ್ಲಿ ಆಯಾ ಕೈಗಾರಿಕೆ ಆಗಬೇಕು. ಸಾಗಣೆ ವೆಚ್ಚ ಕಡಿಮೆಯಾಗಿ ಎಲ್ಲರಿಗೂ ಅನುಕೂಲ ಆಗಲಿದೆ. ಜಿಂದಾಲ್ಗೆ ಸಾವಿರಾರು ಎಕರೆ ಕೊಟ್ಟರೂ ಅದು ಕಾಂಗ್ರೆಸ್‌ನವರಲ್ಲವೇ ಎಂದು ಪ್ರಶ್ನಿಸಿದ ಅಶೋಕ್, ಕೈಗಾರಿಕೆಗಳು ಶೇ. 2 ರಷ್ಟು ಭೂಮಿ ಕೊಡಿ ಎಂದು ಕೇಳುತ್ತಿವೆ. ಆದರೆ, ನಾವು ಪಾಯಿಂಟ್ 6 ಪರ್ಸೆಂಟ್ ಮಾತ್ರ ಕೊಟ್ಟಿದ್ದೇವೆ. ಮೂಲ ಭೂ ಸುಧಾರಣೆ ಕಾಯಿದೆಯಲ್ಲಿ 79 ಎಬಿ ಇಲ್ಲ, ಅದನ್ನು ಕಾಂಗ್ರೆಸ್ ಸೇರಿಸಿತ್ತು. 1.76 ಲಕ್ಷ ಎಕರೆ ಭೂಮಿ ಮೇಲೆ 79 ಎಬಿ ಕೇಸ್ ಹಾಕಲಾಗಿತ್ತು. ಆದರೆ ಎಲ್ಲಾ ಕೇಸ್ಗಳು ವಜಾ ಆದವು. ಡಿಸಿ, ಎಸಿ, ತಹಸೀಲ್ದಾರ್ಗಳ ಮೂಲಕ ಕಿರುಕುಳ ಕೊಡುವ ಕೆಲಸ ಆಗುತ್ತಿತ್ತು. 25 ಲಕ್ಷ ಎಕರೆ ಭೂಮಿ ಕಳೆದ ಹತ್ತು ವರ್ಷದಿಂದ ಪಾಳು ಬಿದ್ದಿತ್ತು. ಇದರ ಸದುಪಯೋಗ ಮಾಡಲು ಕಾಯಿದೆ ತಂದಿದ್ದೇವೆ ಎಂದು ಹೇಳಿದರು.
ಕಾಯಿದೆ ವಿರೋಧಿಸಿದರೆ ನರಕಕ್ಕೆ ಹೋಗುತ್ತೀರಿ : ಗೋಹತ್ಯೆ ನಿಷೇಧ ಕಾಯಿದೆಯನ್ನು ವಿರೋಧಿಸಿ ಯಾಕೆ ನರಕಕ್ಕೆ ಹೋಗುತ್ತೀರಿ? ಮುದಿ ಗೋವುಗಳನ್ನು ಬಿಜೆಪಿಯವರ ಮನೆ ಹತ್ತಿರ ತಂದು ಬಿಡಿ. ಹಾಗೇ, ನಿಮ್ಮ ಮನೆಯ ಹಿರಿಯರನ್ನೂ ತಂದು ಬಿಡಿ. ಅವರನ್ನೂ ನಾವು ಸಾಕುತ್ತೇವೆ. ಸಾವಿರಾರು ಎಕರೆ ಭೂಮಿ ಕೊಟ್ಟು ಗೋಶಾಲೆ ಮಾಡುತ್ತೇವೆ ಎಂದು ವಿರೋಧ ಪಕ್ಷಗಳ ನಾಯಕರಿಗೆ ತಿರುಗೇಟು ನೀಡಿದರು.
ಗೋಹತ್ಯೆ ನಿಷೇದ ಇದು ನಮ್ಮ ಪ್ರಣಾಳಿಕೆಯಲ್ಲೇ ಇತ್ತು. ಇದು ನಮಗೆ ರಕ್ತದಲ್ಲೇ ಬಂದಿದೆ. ಮನುಷ್ಯ ಹುಟ್ಟಿದಾಗಲೂ, ಸತ್ತಾಗಲೂ ಬಾಯಿಗೆ ಹಾಲು ಹಾಕ್ತಾರೆ. ಆದರೆ ಗೋವಿನ ಬಾಯಿಗೆ ಯಾಕೆ ಮಣ್ಣು ಹಾಕುತ್ತೀರಾ? ಎಂದು ಪ್ರಶ್ನಿಸಿದ ಅವರು, ಪರಿಷತ್ನಲ್ಲಿ ಇವರು ಆಡುವ ಆಟ ಗೊತ್ತಿತ್ತು. ಮಸೂದೆಯನ್ನು ಕೋಲ್ಡ್ ಸ್ಟೋರೇಜ್ಗೆ ಕಳಿಸುವ ಉದ್ದೇಶ ಕಾಂಗ್ರೆಸ್ನದ್ದಾಗಿತ್ತು. ಹೀಗಾಗಿ ನಾವು ಮಸೂದೆ ಮಂಡಿಸಲೇ ಇಲ್ಲ. ಅವರಂತೆ ನಾವು ಸಹ ರಾಜಕೀಯದಲ್ಲಿ ಚಾಣಕ್ಯರು ಎಂದರು.