ಬೆಂಗಳೂರು : ತೌಕ್ತೆ ಚಂಡಮಾರುತದ ಕುರಿತಂತೆ ಉಂಟಾಗಲಿರುವ ಹವಾಮಾನ ವೈಪರೀತ್ಯದ ಕುರಿತು ಜಿಲ್ಲಾ ಆಡಳಿತವು ನಿರಂತರ ಮುನ್ನೆಚ್ಚರಿಕೆ ನೀಡಿದ್ದಾಗಲೂ ದಡಕ್ಕೆ ಹಿಂದಿರುಗದ ಟಗ್ ಬೋಟ್ಗಳ ನಿರ್ಧಾರದ ಕುರಿತಂತೆ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.
ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಕಂದಾಯ ಸಚಿವ ಆರ್.ಅಶೋಕ್ ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ವರದಿಯ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಟಗ್ ಬೋಟ್ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ತಲಾ ರೂ. 10 ಲಕ್ಷ ಪರಿಹಾರ ಧನ ನೀಡುವಂತೆ ಆದೇಶಿಸಿದ್ದಾರೆ. ಹಾಗೆಯೇ ಚಂಡಮಾರುತದಿಂದ ಸಂಪೂರ್ಣ ಮನೆ ಕಳೆದುಕೊಂಡವರಿಗೆ ರೂ. 5 ಲಕ್ಷ ಪರಿಹಾರ ಧನ ಘೋಷಿಸಲಾಗಿದೆ. ಭಾಗಶಃ ಹಾನಿಗೊಳಗಾದ ಮನೆಗಳಿಗೆ ರೂ. 1 ಲಕ್ಷ ಹಾಗೂ ಚಂಡಮಾರುತದಿಂದ ಸಣ್ಣ-ಪುಟ್ಟ ನಷ್ಟ ಅನುಭವಿಸಿದ 182 ಕುಟುಂಬಗಳಿಗೆ 10 ಸಾವಿರ ಪರಿಹಾರ ಘೋಷಿಸಿದ್ದಾರೆ.
ಇದನ್ನೂ ಓದಿ: ಕೊರೊನಾಗೆ ತಂದೆ - ತಾಯಿ,ಅಜ್ಜಿ-ತಾತ ಬಲಿ: ತಬ್ಬಲಿಯಾದ ಬಾಲಕ
ಇದಕ್ಕೂ ಮೊದಲು ನವ ಮಂಗಳೂರು ಬಂದರಿನಲ್ಲಿ ಕೋರಮಂಡಲ್ ಟಗ್ ಬೋಟ್ನಿಂದ ರಕ್ಷಿಸಲ್ಪಟ್ಟ ಸದಸ್ಯರನ್ನ ಭೇಟಿಯಾದ ಸಚಿವ ಆರ್.ಅಶೋಕ್ ಯಶಸ್ವಿಯಾಗಿ ರಕ್ಷಣಾ ಕಾರ್ಯ ಕೈಗೊಂಡ ಭಾರತೀಯ ಕರಾವಳಿ ರಕ್ಷಣಾ ಪಡೆ, ಪಶ್ಚಿಮ ನೌಕಾ ಪಡೆ ಹಾಗೂ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿದರು.
ರಕ್ಷಣಾ ಕಾರ್ಯದಲ್ಲಿ ಟಗ್ ಬೋಟ್ನಲ್ಲಿದ್ದ ನಾಲ್ವರನ್ನ ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದ್ದು, ನಾಲ್ವರನ್ನ ಬೋಟ್ ಮೂಲಕ ರಕ್ಷಿಸಲಾಗಿದೆ. ಈ ಟಗ್ ಬೋಟ್ ಬಂದರು ವ್ಯಾಪ್ತಿಯಿಂದ ದೂರಕ್ಕೆ ಕೊಚ್ಚಿಕೊಂಡು ಹೋಗಿ ಬಂಡೆಗಳ ನಡುವೆ ಸಿಲುಕಿ ಹಾಕಿಕೊಂಡಿತ್ತು.
ಹವಾಮಾನ ವೈಪರಿತ್ಯದ ಕಾರಣ ಐಸಿಜಿಎಸ್ ವರಾಹ ಟಗ್ ಬೋಟ್ ಬಳಿ ತೆರಳಲು ಸಾಧ್ಯವಾಗಿರಲಿಲ್ಲ. ಸೋಮವಾರ ಬೆಳಗ್ಗೆ ಕೈಗೊಂಡ ಕಾರ್ಯಾಚರಣೆಯಲ್ಲಿ ಕೊಚ್ಚಿಯಿಂದ ಆಗಮಿಸಿದ ಐಎನ್ಎಸ್ ಗರುಡಾ ಹೆಲಿಕಾಪ್ಟರ್ ಮೂಲಕ ಟಗ್ ಬೋಟ್ನಲ್ಲಿ ಸಿಕ್ಕಿ ಹಾಕಿಕೊಂಡ ನಾಲ್ವರನ್ನ ರಕ್ಷಣೆ ಮಾಡಲಾಯಿತು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬೋಟ್ ನಿಂದ ರಕ್ಷಿಸಿದವರಿಗೆ ತುರ್ತು ಚಿಕಿತ್ಸೆಯನ್ನ ನೀಡಲಾಯಿತು.