ಬೆಂಗಳೂರು: ಉಪ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದರಿಂದ ಮುನಿಸಿಕೊಂಡಿರುವ ಕಂದಾಯ ಸಚಿವ ಆರ್. ಅಶೋಕ್, ಪಕ್ಷದ ಸಂಘಟನಾತ್ಮಕ ಚಟುವಟಿಕೆಯಿಂದ ದೂರ ಉಳಿಯುವ ಮೂಲಕ ಮತ್ತೊಮ್ಮೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ನಗರದ ಬಿಜೆಪಿ ಸಂಘಟನಾತ್ಮಕ ವಿಚಾರ ಹಾಗೂ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿಂದು ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಕರೆದಿದ್ದ ಸಭೆಗೆ ಸಚಿವ ಆರ್.ಅಶೋಕ್ ಗೈರಾಗಿದ್ದಾರೆ.
ಇನ್ನು ಸಭೆಯಲ್ಲಿ ಡಿಸಿಎಂ ಡಾ. ಸಿ.ಎನ್. ಅಶ್ವಥ್ ನಾರಾಯಣ್, ಸಂಸದರಾದ ಪಿ.ಸಿ. ಮೋಹನ್ ಹಾಗೂ ತೇಜಸ್ವಿ ಸೂರ್ಯ, ಬೆಂಗಳೂರು ಮಹಾನಗರ ಜಿಲ್ಲಾಧ್ಯಕ್ಷ ಎಸ್. ಮುನಿರಾಜು, ಬೆಂಗಳೂರು ನಗರ ಅಧ್ಯಕ್ಷ ಪಿ.ಎನ್. ಸದಾಶಿವ ಸೇರಿದಂತೆ ಬೆಂಗಳೂರಿನ ಪ್ರಮುಖ ನಾಯಕರು ಭಾಗಿಯಾಗಿದ್ದರು. ಆದರೆ ಈ ಮಹತ್ವದ ಸಭೆಯಿಂದ ಆಹ್ವಾನವಿದ್ದರೂ ಅಶೋಕ್, ಗೈರಾಗಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಉಪ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ ಎನ್ನುವುದಕ್ಕಿಂತಲೂ ಡಾ.ಸಿ ಎನ್ ಅಶ್ವಥ್ನಾರಾಯಣ್ಗೆ ಡಿಸಿಎಂ ಸ್ಥಾನ ನೀಡಿರುವುದಕ್ಕೆ ಅಶೋಕ್ಗೆ ಹೆಚ್ಚಿನ ಬೇಸರವಾಗಿದೆ. ಬೆಂಗಳೂರು ಉಸ್ತುವಾರಿಯೂ ಬಹುತೇಕ ಕೈತಪ್ಪಲಿದೆ ಎನ್ನಲಾಗಿದೆ ಹೀಗಾಗಿ ಅಶೋಕ್ ಸಂಘಟನಾತ್ಮಕ ಸಭೆಗಳಿಂದ ದೂರ ಉಳಿಯುವುದನ್ನು ಮುಂದುವರೆಸಿದ್ದಾರೆ ಎನ್ನಲಾಗಿದೆ.
ನೂತನ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಅಶೋಕ್ ಜೊತೆ ಸಂಧಾನಕ್ಕೆ ಪ್ರಯತ್ನ ನಡೆಸಿದ್ದರೂ ಸಫಲವಾಗಲಿಲ್ಲ. ಸಿಎಂ ಯಡಿಯೂರಪ್ಪ ಸದ್ಯದ ಮಟ್ಟಿಗೆ ಯಾರ ಮನವೊಲಿಕೆ ಮಾಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಪಕ್ಷದ ನಾಯಕರ ನಡುವಿನ ಮುನಿಸು ಮತ್ತಷ್ಟು ದಿನ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.