ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಹಗರಣದ ಬಗ್ಗೆ ಕಾಂಗ್ರೆಸ್ ಪ್ರತಿಭಟಿಸುವ ಮೂಲಕ ನಾಟಕವಾಡುತ್ತಿದೆ. ಗಾಂಧಿ ಕುಟುಂಬಸ್ಥರನ್ನು ರಕ್ಷಿಸಲು ಪಕ್ಷ ಧರಣಿಗೆ ಮುಂದಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಸ್ವಾತಂತ್ರ್ಯ ಬರುವ ಮೊದಲು ಆರಂಭವಾಗಿದೆ. ಸ್ವಾತಂತ್ರ್ಯ ಯೋಧರು ಹಣ ಹೂಡಿ ರೂಪಿಸಿದ ಪತ್ರಿಕಾ ಸಂಸ್ಥೆಯಾಗಿದೆ. 2 ಸಾವಿರ ಕೋಟಿ ರೂಪಾಯಿಗೂ ಅಧಿಕ ಬೆಲೆ ಬಾಳುವ ಸಂಸ್ಥೆ ಇದಾಗಿದ್ದು, ಅದನ್ನು ಕಬಳಿಸಲು, ಕುಟುಂಬದ ಆಸ್ತಿ ಮಾಡಿಕೊಳ್ಳಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಹೊರಟಿದ್ದಾರೆ ಎಂದು ದೂರಿದರು.
ಇದು ಕಾಂಗ್ರೆಸ್ ಪಕ್ಷದ ಮೇಲಿನ ಕೇಸ್ ಅಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೇಲೆ ನಡೆಯುತ್ತಿರುವ ಕೇಸ್ ಇದು. ಒಂದು ಕುಟುಂಬದ ಮೇಲಿನ ಕೇಸ್ ಮಾತ್ರ. ಕುಟುಂಬದ ಇಬ್ಬರಿಗೆ ಹೆಚ್ಚು ಹಣ ಹೋಗ್ತಿದೆ. ಅದನ್ನು ರಕ್ಷಿಸಿಕೊಳ್ಳಲು ಆ ಕುಟುಂಬ ಪಕ್ಷವನ್ನೇ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದರು.
ಇ.ಡಿ. ಸ್ವಾಯತ್ತ ಸಂಸ್ಥೆಯಾಗಿದೆ. ಬಿಜೆಪಿ ನಾಯಕ ಸುಬ್ರಹ್ಮಣ್ಯ ಸ್ವಾಮಿ ಅವರು ಕೇಸ್ ಹಾಕಿರೋದು ಇಬ್ಬರ ಮೇಲೆ, ಪಕ್ಷದ ಮೇಲೆ ಅಲ್ಲ. ತನಿಖೆ ನಡೆಯುತ್ತಿದೆ. ಅದರಿಂದ ತಪ್ಪಿಸಿಕೊಂಡು ಹೋಗುವ ಕೆಲಸ ಆಗಬಾರದು ಎಂದು ಹೇಳಿದರು.
ಸಾಮಾನ್ಯ ವ್ಯಕ್ತಿಗಳ ಮೇಲೂ ತನಿಖೆ ಆಗುತ್ತಿದೆ. ಅವರಿಗೊಂದು ಕಾನೂನು, ನಿಮಗೊಂದು ಕಾನೂನಾ.? ನೀವು ನಿರಪರಾಧಿ ಆಗಿದ್ದರೆ ಕೇಸ್ನಿಂದ ಹೊರಬರುವಿರಿ. ಅಪರಾಧಿ ಆಗಿದ್ದರೆ ಶಿಕ್ಷೆ ಆಗಲಿದೆ. ಇದು ಇಟಲಿ ಅಲ್ಲ. ಬಂಧನದ ಭೀತಿಗೆ ಹೆದರಿ ಈ ರೀತಿ ಮಾಡಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ ಕಣದಿಂದ ಹಿಂದೆ ಸರಿದ ಶರದ್ ಪವಾರ್