ಬೆಂಗಳೂರು: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ರ ಸೆಕ್ಷನ್ 5 ಅಡಿಯಲ್ಲಿ ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಅನುಮತಿಸಿ ಆದೇಶ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಹೇಳಿದ್ದಾರೆ.
ನ್ಯಾಯಾಲಯದ ತೀರ್ಪು ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಗೋಹತ್ಯೆ ನಿಷೇಧ ಕಾಯ್ದೆಯ ಅನುಷ್ಠಾನ ವಿಚಾರದಲ್ಲಿ ಸರ್ಕಾರದ ಆದೇಶವನ್ನು ಉಚ್ಛ ನ್ಯಾಯಾಲಯ ಎತ್ತಿ ಹಿಡಿದಿದೆ. ಇದನ್ನು ನಾವೆಲ್ಲರೂ ಗೌರವಿಸಿ, ಪಾಲಿಸಬೇಕು. ಈ ನಿಯಮ ಜಾರಿಯ ಅರ್ಜಿ ಕುರಿತಂತೆ ನ್ಯಾಯಾಲಯ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿರುವುದನ್ನು ಎಲ್ಲರೂ ಸೌಹಾರ್ದದಿಂದ ಮತ್ತು ಪರಸ್ಪರ ಗೌರವದಿಂದ ಪಾಲಿಸಬೇಕೆಂದು ಮನವಿ ಮಾಡಿದ್ದಾರೆ.
ಯಾವುದೇ ನಿರ್ದಿಷ್ಟ ಧರ್ಮದವರಾಗಲಿ ಗೋಮಾತೆಯನ್ನು ಸಂರಕ್ಷರಣೆ ಮಾಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎನ್ನುವುದನ್ನು ಅರಿತು ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ ವಿಚಾರವನ್ನು ನ್ಯಾಯಾಲಯವು ಆಳವಾಗಿ ಅಧ್ಯಯನ ಮಾಡಿ ಸರಿಯಾದ ತೀರ್ಪು ನೀಡಿದೆ. ಎಲ್ಲರಿಗೂ ಅಮೃತ ನೀಡುತ್ತಿರುವ ಗೋವು ರಕ್ಷಣೆಯಾಗಬೇಕು. ಗೋವು ಜಾಗೃತಿಯಿಂದ ನಾಡು, ಜನತೆ ಒಂದುಗೂಡಲು ಸಾಧ್ಯವಾಗುತ್ತದೆ. ಗೋವು ಹಾಲು ಕುಡಿಯುವವರು ಗೋ ಮಾತೆ ಸೇವೆಗೆ ಕಟಿಬದ್ಧರಾಗಬೇಕು. ಎಲ್ಲರ ತಾಯಿಯಾದ ಗೋ ಮಾತೆಯ ಸೇವೆ ದೇಶ ಕಲ್ಯಾಣಕ್ಕೆ ಪೂರಕವಾಗಿದೆ ಎಂದು ಹೇಳಿದ್ದಾರೆ.
ಗೋವು ಪ್ರಾಣಿಯಲ್ಲ, ರಾಷ್ಟ್ರದ ಸಂಪತ್ತು. ಭಾರತೀಯ ಪರಂಪರೆಯಲ್ಲಿ ಗೋವುಗಳಿಗೆ ದೈವಿಕ ಸ್ಥಾನ ನೀಡಲಾಗಿದೆ. ಪೊಲೀಸ್ ಹಾಗೂ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳು ಸರ್ಕಾರದ ಆದೇಶ ಎತ್ತಿಹಿಡಿದಿರುವ ಹೈಕೋರ್ಟ್ ತೀರ್ಪುನ್ನು ಕಟ್ಟುನಿಟ್ಟಾಗಿ ಅನುಷ್ಢಾನಗೊಳಿಸಲು ಸದಾ ಜಾಗೃತರಾಗಿರಬೇಕು ಎಂದು ಸಚಿವರು ತಿಳಿಸಿದ್ದಾರೆ.
ಗೋಹತ್ಯೆ ಕಾಯ್ದೆಯ ಸೆಕ್ಷನ್ 5 ಪ್ರಕಾರ, ಯಾವುದೇ ವ್ಯಕ್ತಿ ಯಾವುದೇ ರೀತಿಯಲ್ಲೂ ರಾಜ್ಯದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಲ್ಲುವ ಉದ್ದೇಶಕ್ಕೆ ಜಾನುವಾರುಗಳನ್ನು ಸಾಗಿಸಬಾರದು ಅಥವಾ ಸಾಗಣೆಗೆ ಅವಕಾಶ ಮಾಡಿಕೊಡಬಾರದು. ನಿಯಮ ಉಲ್ಲಂಘಿಸಿ ಸಾಗಣೆ ಮಾಡಿದರೆ ಅದು ಅಪರಾಧ ಕೃತ್ಯವಾಗಲಿದೆ. ಆದರೆ, ಕೃಷಿ ಮತ್ತು ಪಶುಸಂಗೋಪನೆ ಉದ್ದೇಶಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರ ನಿಗದಿಪಡಿಸಿರುವ ನಿಯಮಗಳ ಅನುಸಾರ ಜಾನುವಾರು ಸಾಗಣೆ ಅಪರಾಧ ಕೃತ್ಯವಾಗುವುದಿಲ್ಲ ಎಂದು ಪ್ರಭು ಚವ್ಹಾಣ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಗೋಹತ್ಯೆ ನಿಷೇಧ ಕಾಯ್ದೆ: ಜಾನುವಾರು ಸಾಗಣೆ ನಿರ್ಬಂಧಿಸುವ ಸೆಕ್ಷನ್ 5ರ ಜಾರಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್