ಬೆಂಗಳೂರು : ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ಪ್ರಕಾರ ಖಾಲಿ ಹುದ್ದೆ, ಬ್ಲಾಕ್‌ವಾರು, ವಿಷಯಾವಾರು ಶೇ.50ರಷ್ಟು ಸ್ನಾತಕೋತ್ತರ ಪದವಿ ಪಡೆದ ಪ್ರೌಢಶಾಲಾ ಸಹ ಶಿಕ್ಷಕರಿಂದ ಬಡ್ತಿ ಮೂಲಕ ನೇಮಕ ಕುರಿತು ಜೇಷ್ಠತಾ ಪಟ್ಟಿ ಪ್ರಕಟ ವಿಳಂಬವಾಗಿದೆ ಎಂದು ಸಚಿವ ಬಿಸಿ ನಾಗೇಸ್ ಪರಿಷತ್ ಕಲಾಪಕ್ಕೆ ಹೇಳಿದರು.
ಒಂದು ತಿಂಗಳಿನಲ್ಲಿ ಎಲ್ಲಾ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಭರವಸೆ ನೀಡಿದ ಅವರು, ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಪ್ರಶ್ನೆಗೆ ಉತ್ತರಿಸುತ್ತಾ, ಅಧಿಕಾರಿಗಳ ಉತ್ತರ ನನಗೇ ಸ್ಪಷ್ಟನೆ ಸಿಕ್ಕಿಲ್ಲ. ಹಾಗಾಗಿ, ಸರಿಯಾದ ಉತ್ತರ ತರಿಸಿ ಕೊಡಲಾಗುತ್ತದೆ ಎಂದರು.
'ಪ್ರಭಾರ ಪ್ರಾಂಶುಪಾಲರಿಗೂ ಗಳಿಕೆ ರಜೆ'
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಉಪನ್ಯಾಸಕರಿಗೆ ಗಳಿಕೆ ರಜೆ ನಿರಾಕರಿಸುತ್ತಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆ. ಇದನ್ನು ಸರಿಪಡಿಸಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಭರವಸೆ ನೀಡಿದ್ದಾರೆ.
ಪ್ರಶ್ನೋತ್ತರ ಕಲಾಪದ ವೇಳೆ ಜೆಡಿಎಸ್ ಸದಸ್ಯ ಭೋಜೇಗೌಡರ ಪ್ರಶ್ನೆಗೆ ಸಚಿವರು ನೀಡಿದರು. ಈ ಉತ್ತರಕ್ಕೆ ಅಸಮಧಾನ ವ್ಯಕ್ತಪಡಿಸಿದ ಭೋಜೇಗೌಡ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ, ಕೆಸಿಎಸ್ಆರ್ ನಿಯಮ ಎಲ್ಲರಿಗೂ ಒಂದೇ. ಯಾಕೆ ಗಳಿಕೆ ರಜೆ ಕೊಡುತ್ತಿಲ್ಲ? ಸಚಿವರನ್ನು ಸದನದಲ್ಲಿ ಮುಜುಗರಕ್ಕೀಡುಮಾಡಲಾಗುತ್ತಿದೆ ಎಂದು ಕಿಡಿಕಾರಿದರು. ಮಂಗಳೂರು, ಚಿಕ್ಕಮಗಳೂರಿನಲ್ಲಿ ಕೊಟ್ಟಿದ್ದಾರೆ, ಬೇರೆ ಕಡೆ ಯಾಕೆ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಂತರ ಅಧಿಕಾರಿಗಳ ಜೊತೆ ಮತ್ತೊಮ್ಮೆ ಮಾತುಕತೆ ನಡೆಸಿ ಲೋಪವಾಗಿದ್ದರೆ ಸರಿಪಡಿಸಲಾಗುತ್ತದೆ, ಗಳಿಕೆ ರಜೆ ಎಲ್ಲರಿಗೂ ಒಂದೆ ಆಗಿದ್ದು ಅದನ್ನು ಕೊಡುವ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.