ಬೆಂಗಳೂರು: ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸಾಕಷ್ಟು ದಲಿತ ಮುಖಂಡರು 7 ಡಿ ಕಾಯ್ದೆಯನ್ನು ರದ್ದುಪಡಿಸಿ ಎಂದು ಮನವಿ ಮಾಡಿದರೂ, 5 ವರ್ಷ ತಾವೇನು ಮಾಡಿದಿರಿ. ದಲಿತರು ತಮ್ಮ ಬಳಿ ಮನವಿ ಮಾಡಿದಾಗಲೇ ಕಾನೂನು ಬದಲಿಸುವ ಅವಕಾಶವಿದ್ದರೂ ಸುಮ್ಮನಿದ್ದು, ಈಗ ಸರ್ಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದರು.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿ, ಸಿದ್ದರಾಮಯ್ಯನವರು ರಾಜಕಾರಣದಲ್ಲಿ ಅನುಭವವುಳ್ಳವರು, 2013ರಲ್ಲಿ ಅವರ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಕಾಯ್ದೆಯನ್ನು ತರಲಾಗಿತ್ತು. ಎಸ್ಸಿಪಿ ಮತ್ತು ಟಿಎಸ್ಪಿ ಕಾಯ್ದೆ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.24.10 ರಷ್ಟು ಅನುಷ್ಠಾನ ಮಾಡಬೇಕು ಎಂದು ನಿರ್ಧಾರ ಕೈಗೊಳ್ಳಲಾಗಿತ್ತು.
1971 ರ ಕಾಯ್ದೆಯಲ್ಲಿ ಸ್ಪಷ್ಟವಾಗಿ ತಿಳಿಸಿರುವಂತೆ ಸರ್ಕಾರ ಇಚ್ಚಿಸಿದಲ್ಲಿ ಯೋಜನೆಯ ಫಲಾನುಭವಿಗಳಿಗೆ ಭಾಗಶಃ ಹಣ ವಿನಿಯೋಗಿಸಬಹುದು ಎಂದು ತಿಳಿಸಲಾಗಿತ್ತು. ಆ ಕಾಯಿದೆಯ 7ಡಿನಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ಕಾಯ್ದೆ ತಂದವರು ನೀವು ಹಾಗೂ 7ಡಿ ಅಳವಡಿಸಿದವರು ನೀವು. ಈಗ ಯಾರನ್ನ ದೂರುತ್ತೀರಿ ಎಂದು ಕೇಳಲು ಇಚ್ಚಿಸುತ್ತೇನೆ ಎಂದರು.
ಅಂಕಿ ಅಂಶಗಳ ವಿವರಣೆ ನೀಡಿದ ಸಚಿವರು, 2014 ರಿಂದ 2018 ರವರೆಗೆ ಅವರೇ ಮುಖ್ಯಮಂತ್ರಿಯಾಗಿದ್ದರು. ಆಗ 7 ಡಿ ಅಡಿ 5256 ಕೋಟಿ ರೂ. ವೆಚ್ಚ ಮಾಡಿದ್ದರು. ಆದರೆ, ಈಗ ನಮ್ಮ ಮೇಲೆ 7 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿರುವ ಆರೋಪವಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ 5,256 ಕೋಟಿ ರೂಪಾಯಿ (ಶೇ.7ರಷ್ಟು) ವಾರ್ಷಿಕ ವೆಚ್ಚವಾಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಶೇ.7ರಷ್ಟು ಮಾತ್ರ ಆಗಿದೆ. ಈಗಿನ ನಮ್ಮ ಸರ್ಕಾರವೂ ಕೂಡ ಶೇ.7ರಷ್ಟು ಹಣವನ್ನೇ ಖರ್ಚು ಮಾಡಿದೆ. ಹಿಂದಿನ ಸರ್ಕಾರ ನೀಡಿದ ಮಾದರಿಯಲ್ಲಿಯೇ ನಾವು ಸಹ 7ಡಿ ಅಡಿ ವೆಚ್ಚ ಮಾಡಿದ್ದೇವೆ ಎಂದರು.
ಓದಿ: ತುಮಕೂರಿನಲ್ಲಿ ಸಂತಾನಕ್ಕಾಗಿ ನೀಡಿದ ನಕಲಿ ಚಿಕಿತ್ಸೆಗೆ ಮಹಿಳೆ ಬಲಿ.. ವೈದ್ಯ ದಂಪತಿಯ ಬಂಧನ