ಬೆಂಗಳೂರು: ಸರ್ಕಾರದ ಆರೋಗ್ಯ ಸೇವೆ ಕಾರ್ಯಕ್ರಮಗಳಲ್ಲಿ ನಿಗದಿತ ಗುರಿ ತಲುಪದ ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಆರೋಗ್ಯಾಧಿಕಾರಿಗಳನ್ನೇ ಹೊಣೆ ಮಾಡಿ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳ (ಡಿಎಚ್‌ಒ) ಸಭೆಯಲ್ಲಿ ಪ್ರಗತಿ ಪರಿಶೀಲಿಸಿ ಮಾತನಾಡಿದ ಸಚಿವರು, ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಕೋಟಿಗಟ್ಟಲೇ ಹಣವನ್ನೂ ವೆಚ್ಚ ಮಾಡಲಾಗುತ್ತಿದೆ. ಆದರೂ, ನಿರೀಕ್ಷಿತ ಫಲಿತಾಂಶ ಸಿಗದಿದ್ದರೆ ಇಷ್ಟೆಲ್ಲಾ ವ್ಯವಸ್ಥೆ, ಸಿಬ್ಬಂದಿಗಳಿದ್ದು ಏನು ಪ್ರಯೋಜನ? ಜನರಿಗೆ ಉತ್ತರದಾಯಿತ್ವರಲ್ಲದ ಅಧಿಕಾರಿಗಳ ತಲೆದಂಡ ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.
ಸಣ್ಣಪುಟ್ಟ ಗೊಂದಲ, ಸಮಸ್ಯೆಗಳನ್ನು ಜಿಲ್ಲಾ ಹಂತದಲ್ಲೇ ಬಗೆಹರಿಸಿಕೊಳ್ಳಲು ಸಾಧ್ಯವಿದೆ. ಅದಕ್ಕಾಗಿ ಪ್ರತಿ ತಿಂಗಳು ಡಿಎಚ್‌ಒ ಅವರು ಡಿಎಸ್‌ಒ ಮತ್ತು ಇತರೆ ಸಿಬ್ಬಂದಿ ಸಭೆ ಕರೆದು ಸಮಾಲೋಚನೆ ಮೂಲಕ ಪರಿಹರಿಸಿಕೊಳ್ಳಬೇಕು. ಈ ವಿಷಯದಲ್ಲಿ ಅಧಿಕಾರಿಗಳು ಪ್ರತಿಷ್ಟೆ ಬದಿಗಿಟ್ಟು ಕೆಲಸ ಮಾಡಬೇಕು. ನಿಮ್ಮ ಹಂತದಲ್ಲಿ ಇದು ಸಾಧ್ಯ ಆಗದಿದ್ದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಾಸಿಕ ಸಭೆ ನಡೆಸುವ ಪದ್ಧತಿ ಜಾರಿಗೂ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ವರ್ಗಾವಣೆಗೆ ಕಡಿವಾಣ: ಈ ವರ್ಷ ಮಾರ್ಗಸೂಚಿ ಅನ್ವಯ ಮಾತ್ರ ವರ್ಗಾವಣೆಗಳನ್ನು ಮಾಡಲಾಗುವುದು. ಹಿಂದೆ ನಡೆಯುತ್ತಿದ್ದಂತೆ ಬೇಕಾಬಿಟ್ಟಿ ವರ್ಗಾವಣೆಗೆ ಅವಕಾಶ ನೀಡುವುದಿಲ್ಲ. ಒಟ್ಟಾರೆ ವರ್ಗಾವಣೆ ಪ್ರಮಾಣ ಶೇಕಡಾ 15 ಮೀರದಂತೆ ಎಚ್ಚರವಹಿಸಲಾಗುವುದು. ಕೆಲವರು ಬೆಂಗಳೂರು ನಗರ ಬಿಟ್ಟು ಹೋಗುತ್ತಿಲ್ಲ. ಹತ್ತು ವರ್ಷ ಒಂದೇ ಸ್ಥಳದಲ್ಲಿ ಯಾರಾದರೂ ಇದ್ದರೆ ಅಂತಹ ಹುದ್ದೆಗಳನ್ನು ಖಾಲಿ ಎಂದು ಬೇರೆ ನೇಮಕ ಮಾಡಲಾಗುವುದು. ಜತೆಗೆ ನಗರದೊಳಗೆ ಪರಸ್ಪರ ವರ್ಗಾವಣೆ ಕೋರುವ ಪ್ರಕರಣಗಳನ್ನೂ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಧಿಕಾರಿಗಳಿಗೆ ತರಾಟೆ: ಮಕ್ಕಳ ಆರೋಗ್ಯ ಕಾರ್ಯಕ್ರಮ ಅನುಷ್ಠಾನದಲ್ಲಿ ಯಾದಗಿರಿ, ಕೊಪ್ಪಳ, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ನಿಗದಿತ ಗುರಿ ತಲುಪದಿರುವುದಕ್ಕೆ ಡಿಎಚ್‌ಒಗಳನ್ನು ತರಾಟೆ ತೆಗೆದುಕೊಂಡ ಸಚಿವರು, ಏನಾದರೂ ಸಮಸ್ಯೆಗಳು ಇದ್ದಲ್ಲಿ ಹೇಳಿ ಬಗೆಹರಿಸೋಣ? ಆದರೆ, ಎಲ್ಲ ಸೌಲಭ್ಯ ಕೊಟ್ಟ ಮೇಲೂ ಗುರಿ ತಲುಪದಿದ್ದರೆ ಸಹಿಸಲು ಆಗುವುದಿಲ್ಲ. ಜೂನ್ 30 ರೊಳಗೆ ಕನಿಷ್ಟ ಶೇ.80 ಪ್ರಗತಿ ಸಾಧಿಸಬೇಕು ಎಂದು ತಾಕೀತು ಮಾಡಿದರು.
ರಾಯಚೂರು, ಯಾದಗಿರಿ ಜಿಲ್ಲೆಗಳು ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಯಕಲ್ಪ ಯೋಜನೆಯಲ್ಲಿ ನಿರೀಕ್ಷಿತ ಪ್ರಗತಿ ಆಗಿಲ್ಲ. ಇದಕ್ಕೆ ಕಾರಣಗಳೇನು ಎಂಬ ಬಗ್ಗೆ ವರದಿ ನೀಡಬೇಕು ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಂಡು ವಿವರಗಳನ್ನು ತಮ್ಮ ಕಚೇರಿಗೆ ಕಳುಹಿಸಬೇಕು ಎಂದು ಸೂಚಿಸಿದರು.
ಡಯಾಲಿಸಿಸ್‌ಗೆ ಆದ್ಯತೆ ನೀಡಿ: ರಾಜ್ಯಾದ್ಯಂತ ಡಯಾಲಿಸಿಸ್ ವಿಷಯದಲ್ಲಿ ದೂರುಗಳು ಬಾರದಂತೆ ಡಿಎಚ್‌ಒಗಳು ಕಾರ್ಯ ನಿರ್ವಹಿಸಬೇಕು. ಒತ್ತಡ ಆಧರಿಸಿ ಫಲಾನುಭವಿಗಳಿಗೆ ವೇಳಾಪಟ್ಟಿ ನಿಗದಿಗೊಳಿಸಬೇಕು. 167 ಕೇಂದ್ರಗಳಲ್ಲಿ 633 ಡಯಾಲಿಸಿಸ್ ಯಂತ್ರಗಳು ಕೆಲಸ ಮಾಡುತ್ತಿವೆ. ಒಟ್ಟು 4184 ಫಲಾನುಭವಿಗಳಿದ್ದಾರೆ. ಒತ್ತಡ ಹೆಚ್ಚು ಇರುವ ಕಡೆ ಮತ್ತಷ್ಟು ಯಂತ್ರಗಳನ್ನು ಆದ್ಯತೆ ಮೇರೆಗೆ ಅಳವಡಿಸಬೇಕು. ಖಾಸಗಿ ಆಸ್ಪತ್ರೆಯವರು ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆಯುತ್ತಿರುವ ಬಗ್ಗೆ ದೂರುಗಳಿವೆ. ನಿಯಮಿತ ಮೇಲ್ವಿಚಾರಣೆ ಮೂಲಕ ರೋಗಿಗಳಿಗೆ ತೊಂದರೆ ಆಗದಂತೆ ಎಚ್ಚರವಹಿಸಬೇಕು ಎಂದರು.
ಇದನ್ನೂ ಓದಿ: ಬುದ್ಧಿಮಾಂದ್ಯ ಮಕ್ಕಳು ಜನಿಸಿದ್ದಕ್ಕೆ ಪತ್ನಿಗೆ ಕಿರುಕುಳ: ಪತಿ, ಅತ್ತೆ, ನಾದಿನಿಗೆ ಹೈಕೋರ್ಟ್ ಶಿಕ್ಷೆ