ಬೆಂಗಳೂರು: ಕೇಂದ್ರ ಸರ್ಕಾರ ಘೋಷಣೆ ಮಾಡಿದ 3ಲಕ್ಷ ಕೋಟಿ ಪ್ಯಾಕೇಜ್ ಎಂಎಸ್ಎಂಇ (ಅತಿ ಸಣ್ಣ, ಸಣ್ಣ, ಮಧ್ಯಮ ವಲಯ)ಗೆ ತಲುಪಲು ಬ್ಯಾಂಕ್ಗಳು ಸಹಕಾರ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಈ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಈಟಿವಿ ಭಾರತ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ಎಂಎಸ್ಎಂಇ ದಿನದ ನಿಮಿತ್ತ ನಗರದ ಕಾಸಿಯಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೈಗಾರಿಕೆಗಳನ್ನು ಪ್ರಾರಂಭ ಮಾಡುವ ವಿಚಾರವಾಗಿ ಮಾತನಾಡಿದ ಸಚಿವರು, ಸರ್ಕಾರ ತರುತ್ತಿರುವ ತಿದ್ದುಪಡಿಯಿಂದ ಉದ್ಯಮಿಗಳಿಗೆ ಕಾಲಾವಕಾಶ ಸಿಗುತ್ತದೆ. ಈ ಹಿಂದೆ ಎಲ್ಲ ಪತ್ರ ಹಾಗೂ ಒಪ್ಪಿಗೆ ದೊರಕಿದ ಮೇಲೆ ಕೈಗಾರಿಕೆ ಪ್ರಾರಂಭವಾಗುತ್ತಿತ್ತು, ಆದರೆ, ಈಗ 3 ವರ್ಷದ ಒಳಗೆ ಉದ್ಯಮಿಗಳು ಎಲ್ಲ ಪತ್ರಗಳನ್ನು ಸಲ್ಲಿಸಬಹುದು ಎಂದರು.
ಶೀಘ್ರದಲ್ಲೇ ಕೈಗಾರಿಕಾ ಟೌನ್ ಶಿಪ್ ಆರಂಭ:
ಕೊರೊನಾದಿಂದಾಗಿ 3 ತಿಂಗಳು ಆದಾಯದಲ್ಲಿ ಕುಸಿತ ಆಯ್ತು. ದೇಶದಲ್ಲೇ ಎಲ್ಲ ಕೈಗಾರಿಕೆಗಳ ಪ್ರಾರಂಭಕ್ಕೆ ಸಮ್ಮತಿ ಸೂಚಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. 2ನೇ ಹಾಗೂ 3ನೇ ದರ್ಜೆ ನಗರಗಳಲ್ಲೂ ಕೈಗಾರಿಕೆಗಳು ಪ್ರಾರಂಭವಾಗಬೇಕು. ಕೈಗಾರಿಕಾ ಟೌನ್ ಶಿಪ್ ಯೋಜನೆ ಇಷ್ಟು ದಿನ ಚರ್ಚೆಯಲ್ಲಿ ಇತ್ತು. ಈಗ ಇದು ಕಾರ್ಯರೂಪಕ್ಕೆ ಬರಲಿದ್ದು, ಆದಷ್ಟು ಬೇಗ ಪ್ರಾರಂಭವಾಗಲಿದೆ. ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾಗೆ ಇದರ ಜವಾಬ್ದಾರಿ ನೀಡಲಾಗಿದೆ. ಭೌಗೋಳಿಕ ಚಿತ್ರ ಹಾಗೂ ಇನ್ನಿತರ ಅಗತ್ಯ ಕ್ರಮಗಳನ್ನು ಕ್ರೂಢೀಕರಿಸಿ ಕ್ಯಾಬಿನೆಟ್ ಗಮನಕ್ಕೆ ತರಲಾಗುವುದು ಎಂದು ಶೆಟ್ಟರ್ ಆಶ್ವಾಸನೆ ನೀಡಿದರು.