ಬೆಂಗಳೂರು: ರಾಜ್ಯದಲ್ಲಿರುವ ಅಕ್ರಮ ಬಡಾವಣೆಗಳ ವಿಚಾರ ವಿಧಾನಸಭೆ ಕಲಾಪದಲ್ಲಿಂದು ಪ್ರತಿಧ್ವನಿಸಿತು. ಎಲ್ಲ ಪಕ್ಷದ ಶಾಸಕರು ಅಕ್ರಮ ಬಡಾವಣೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒಕ್ಕೊರಲಿನಿಂದ ಆಗ್ರಹಿಸಿದರು.
'ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ'
ಎಲ್ಲರ ಪ್ರಶ್ನೆಗಳಿಗ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಅನಗತ್ಯ ಬಡಾವಣೆ ಮಾಡಿದರೆ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ. ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ. ಎಲ್ಲೆಲ್ಲಿ ಈ ರೀತಿ ಆಗಿದೆ, ಅದರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಇತ್ತೀಚೆಗಷ್ಟೇ ಅಧಿಕಾರಿಗಳ ಜೊತೆ ವಿಶೇಷ ಸಭೆ ನಡೆಸಲಾಗಿದೆ.
ಸಭೆಯಲ್ಲಿ ಅಕ್ರಮ ಬಡಾವಣೆ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇವೆ. ಅಕ್ರಮ ಬಡಾವಣೆಗಳ ಪಟ್ಟಿ ತರಿಸಿ, ಅಂಥವುಗಳನ್ನು ರದ್ದು ಮಾಡಲು ಕ್ರಮ ವಹಿಸುತ್ತೇವೆ. ಕ್ರಿಮಿನಲ್ ಕೇಸ್ ಹಾಕುವ ಸಂಬಂಧನೂ ಚರ್ಚೆ ಮಾಡುತ್ತೇವೆ ಎಂದರು.
ಇದೇ ವಿಚಾರವಾಗಿ ಕಾಂಗ್ರೆಸ್ ಸದಸ್ಯ ರಾಘವೇಂದ್ರ ಹಿಟ್ನಾಳ ಹಿಟ್ನಾಳ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್, ಅಕ್ರಮ ಬಡಾವಣೆಗಳಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ಮೂಲ ಸೌಕರ್ಯ ಕಲ್ಪಿಸಿ ಕೊಡಲಾಗಿದೆ. ಅಂಥ ಮೂಲ ಸೌಕರ್ಯಗಳನ್ನು ತಡೆಹಿಡಿಯುವ ಉದ್ದೇಶ ಇಲ್ಲ ಎಂದರು.
ತಡೆಯಾಜ್ಞೆ ತೆರವು ಗೊಳಿಸುವ ಕ್ರಮಕ್ಕೆ ಸಿಎಂ ಜೊತೆ ಚರ್ಚೆ
ಸ್ಥಳೀಯ ಯೋಜನಾ ಪ್ರದೇಶ ಘೋಷಣೆಯಾಗಿ ಮಾಸ್ಟರ್ ಪ್ಲಾನ್ ಅನುಮೋದನೆಯಾದ ಪ್ರದೇಶಗಳಲ್ಲಿ 2013ರ ಮುಂಚಿತವಾಗಿ ಬಂದ ಬಡಾವಣೆಗಳನ್ನು ಸಕ್ರಮ ಗೊಳಿಸಲು ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಈ ಅಕ್ರಮ ಸಕ್ರಮ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ. ನ್ಯಾಯಾಲಯ ಅದಕ್ಕೆ ತಡೆಯಾಜ್ಞೆ ನೀಡಿದೆ.
ಈ ವಿಚಾರ ಮೂರು ವರ್ಷದಿಂದ ಸುಪ್ರೀಂಕೋರ್ಟ್ನಲ್ಲಿದ್ದು, ಅದನ್ನ ತೆರವು ಮಾಡಲು ಸಿಎಂ ಜೊತೆ ಚರ್ಚೆ ಮಾಡಲಾಗಿದೆ. ತಡೆಯಾಜ್ಞೆಯಿಂದಾಗಿ ಬಿ ಖಾತೆಯನ್ನು ಎ ಖಾತೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಆದಾಯ ಸಂಗ್ರಹ ಸಾಧ್ಯವಾಗುತ್ತಿಲ್ಲ. ಆದಷ್ಟು ಬೇಗ ತಡೆಯಾಜ್ಞೆ ತೆರವು ಗೊಳಿಸಲು ಕ್ರಮ ವಹಿಸಲು ಸಿಎಂ ಜೊತೆ ಚರ್ಚೆ ನಡೆದಿದೆ ಎಂದರು.
ಸ್ಪೀಕರ್ ಕಾಗೇರಿ ಮಧ್ಯಪ್ರವೇಶಿಸಿ, ಸ್ಥಳೀಯ ಮಟ್ಟದ ಅಧಿಕಾರಿಗಳು ನಿಯಂತ್ರಣಕ್ಕೆ ಸಿಗುತ್ತಿಲ್ಲ. ಅವರನ್ನು ಹತೋಟಿಗೆ ತರುವ ಬಗ್ಗೆ ಕ್ರಮ ವಹಿಸಿ. ಸಕ್ರಮ ಬಡಾವಣೆಯಲ್ಲಿ ಮನೆ ಕಟ್ಟಲು ಮಾಲೀಕ ಪರದಾಡುವಂತೆ ಆಗಿದೆ. ನಿವೇಶನ ಮಾಲೀಕ ಮೊದಲ ಮಹಡಿ ಕಟ್ಟಲು ಸಾಧ್ಯವಾಗುತ್ತಿಲ್ಲ.
ಮಾಲೀಕನಿಗೆ ಸ್ವಂತ ಮನೆ ಕಟ್ಟಲು ಬೇಜವಾಬ್ದಾರಿ ಅಧಿಕಾರಿಗಳಿಂದಾಗಿ ಸಾಧ್ಯವಾಗುತ್ತಿಲ್ಲ. ಸೆಟ್ ಬ್ಯಾಕ್ ಬಿಟ್ಟಿಲ್ಲ ಎಂದು ತಕರಾರು ತೆಗೆಯುತ್ತಾರೆ. ರಾಜ್ಯದ ಜನರಲ್ಲಿ ಅಸಮಾಧಾನ ಮಡುಗಟ್ಟಿದೆ. ಅದು ಯಾವತ್ತೋ ಒಂದು ದಿನ ಸ್ಫೋಟಗೊಳ್ಳುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಈ ಸಮಸ್ಯೆಯನ್ನು ಬಗೆಹರಿಸುವಂತೆ ಸ್ಪೀಕರ್ ಸೂಚನೆ ನೀಡಿದರು.