ಬೆಂಗಳೂರು: ಡೈರೆಕ್ಟರೇಟ್ ಆಫ್ ಸೆಕೆಂಡರಿ ಅಗ್ರಿಕಲ್ಚರ್ ರಚನೆ ಕುರಿತ ಪ್ರಧಾನಿಯವರ ಕನಸನ್ನು ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಜಾರಿ ಮಾಡಲಾಗಿದೆ. ಇದರಿಂದ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಪ್ರಾಣಿಜನ್ಯ ಉತ್ಪನ್ನಗಳ ಸಂಸ್ಕರಣೆ, ಗುಡಿ ಕೈಗಾರಿಕೆ ಮೂಲಕ ರೈತರಿಗೆ ಹೆಚ್ಚಿನ ಆದಾಯ, ಉದ್ಯೋಗ ಹೆಚ್ಚಳ ಸಾಧ್ಯವಾಗಿದೆ. ಕೃಷಿ ಉಪ ಉತ್ಪನ್ನಗಳ ತಯಾರಿಕೆಯೂ ಸಾಧ್ಯವಾಗುತ್ತಿದೆ ಎಂದು ರಾಜ್ಯದ ಕೃಷಿ ಇಲಾಖೆ ಸಚಿವರಾದ ಬಿ.ಸಿ.ಪಾಟೀಲ್ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆತ್ಮನಿರ್ಭರ್ ಯೋಜನೆಯಡಿ ಆಹಾರ ಸಂಸ್ಕರಣಾ ಘಟಕಗಳನ್ನು ರಚಿಸಲು ಸೆಕೆಂಡರಿ ಡೈರೆಕ್ಟರೇಟ್ ನೆರವಾಗಲಿದೆ. ಇದರಡಿ ಘಟಕಕ್ಕೆ ಪಡೆದ ಸಾಲಕ್ಕೆ ಶೇ 35ರಷ್ಟು ಸಬ್ಸಿಡಿ ಸಿಗಲಿದೆ. ಅಲ್ಲದೆ ರಾಜ್ಯ ಸರಕಾರವು ಶೇ 15 ಸಬ್ಸಿಡಿ ನೀಡಲಿದ್ದು, ಒಟ್ಟು 50 ಶೇಕಡಾ ಸಬ್ಸಿಡಿ ಸಿಗಲಿದೆ ಎಂದು ವಿವರಿಸಿದರು.
ರೈತರ ಮಕ್ಕಳಿಗೆ ಕೃಷಿ ಕಾಲೇಜು ಸೇರಲು ಶೇ.40 ರಷ್ಟಿದ್ದ ಮೀಸಲಾತಿಯನ್ನು ಶೇ.50ಕ್ಕೆ ಹೆಚ್ಚಿಸಲಾಗಿದೆ. ಕಳೆದ ವರ್ಷ 186 ಜನ ರೈತರ ಮಕ್ಕಳಿಗೆ ಹೆಚ್ಚುವರಿ ಸೀಟು ಲಭಿಸಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ರೈತ ವಿದ್ಯಾನಿಧಿ ಆರಂಭ ಮಾಡಿದ್ದು, ಇದರಿಂದ 7.13 ಲಕ್ಷ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 261 ಕೋಟಿ ರೂ. ವಿದ್ಯಾರ್ಥಿವೇತನ ಸಿಕ್ಕಿದೆ. ಇದು ಕೂಡ ದೇಶದಲ್ಲೇ ಮೊದಲು ಎಂದರು.
'ರಸಗೊಬ್ಬರ ಕೊರತೆ ಇಲ್ಲ': ರಾಜ್ಯದಲ್ಲಿ ರಸಗೊಬ್ಬರದ ಯಾವುದೇ ಕೊರತೆ ಇಲ್ಲ. 50 ಸಾವಿರ ಮೆಟ್ರಿಕ್ ಟನ್ ಗೊಬ್ಬರವನ್ನು ಈ ವರ್ಷಕ್ಕಾಗಿ ನಾವು ದಾಸ್ತಾನು ಮಾಡಿದ್ದೇವೆ. ಯೂರಿಯಾ 30 ಸಾವಿರ ಮೆಟ್ರಿಕ್ ಟನ್ ಇದ್ದು, ಡಿಎಪಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದೆ. ಸೂಕ್ಷ್ಮ ನೀರಾವರಿಗೂ ಆದ್ಯತೆ ಕೊಡುತ್ತಿದ್ದು, ನೆರವು ನೀಡಲಾಗುತ್ತಿದೆ.
ರೈತರ ಟ್ರ್ಯಾಕ್ಟರ್ ಸಂಬಂಧ ಡೀಸೆಲ್‌ಗೆ ಸಬ್ಸಿಡಿ ನೀಡಲಾಗುತ್ತಿದೆ. ಇದು ಕೂಡ ದೇಶದಲ್ಲೇ ಮೊದಲ ಬಾರಿಗೆ ಜಾರಿಯಾಗಿದೆ. ಈ ಬಾರಿ ಬಳ್ಳಾರಿ ಜಿಲ್ಲೆಯ ಹಗರಿ ಹಾಗೂ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಕೃಷಿ ಕಾಲೇಜು ಆರಂಭವಾಗಲಿದೆ. ಮಹಿಳೆಯರಿಗೆ ಪ್ರತ್ಯೇಕ ಕೃಷಿ ಪಂಡಿತ ಪ್ರಶಸ್ತಿ ಕೊಡಲಾಗುವುದು ಎಂದು ಸಚಿವರು ತಿಳಿಸಿದರು.
2020-21ರಲ್ಲಿ ರಾಜ್ಯವು ಕೋವಿಡ್ ಸಂಕಷ್ಟದಲ್ಲಿದ್ದರೂ 16055 ಲಕ್ಷ ಮೆಟ್ರಿಕ್ ಟನ್ ಆಹಾರವನ್ನು ಉತ್ಪಾದಿಸಲಾಗಿದೆ. ಇದು ಹಿಂದಿನ ವರ್ಷದ ಉತ್ಪಾದನೆಯಲ್ಲಿ ಶೇ.10ರಷ್ಟು ಹೆಚ್ಚಳದ ಸಾಧನೆಯಾಗಿದೆ. ಕೃಷಿಕರು ಕೋವಿಡ್ ಇದ್ದರೂ ಹಿಂದೆ ಸರಿಯದೆ ಇದ್ದುದಕ್ಕೆ ಇದು ಉದಾಹರಣೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ರಾಜೀನಾಮೆಗೆ ಒತ್ತಾಯಿಸೋದು ಸ್ವಾಭಾವಿಕ, ನಾವು ವಿಪಕ್ಷದಲ್ಲಿದ್ದರೂ ಅದನ್ನೇ ಮಾಡುತ್ತಿದ್ದೆವು: ಸಿ.ಟಿ. ರವಿ