ಬೆಂಗಳೂರು: ನ ಭೂತೋ ನ ಭವಿಷ್ಯತಿ ಎಂಬಂತೆ ಸಮುದಾಯದ ಎರಡು ಕೋಟಿ ಜನರು ಒಮ್ಮೆ ಎದ್ದು ನಿಂತರೆ ಧೂಳಿಪಟ ಆಗುತ್ತೆ. 2023ರಲ್ಲಿ ವಾಲ್ಮೀಕಿ ಸಮುದಾಯದವರ ಮತ ಡಬ್ಬಿ ಒಡೆದು ಹೋಗುವ ತರ ಮತ ಹಾಕಬೇಕು ಎಂದು ಸಚಿವ ಶ್ರೀರಾಮುಲು ಕರೆ ನೀಡಿದರು.
ವಿಧಾನಸೌಧದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನೇಕ ಜಯಂತ್ಯುತ್ಸವ ನೋಡಿದ್ದೇವೆ. ಆದರೆ ಇವತ್ತಿನ ಕಾರ್ಯಕ್ರಮ ಬಂಗಾರದ ಅಕ್ಷರದಲ್ಲಿ ಬರೆಯುವ ದಿನ. ಇದು ಐತಿಹಾಸಿಕ ದಿನವಾಗಿದೆ. ಮೀಸಲಾತಿ ಬಗ್ಗೆ ಐತಿಹಾಸಿಕವಾಗಿ ತೆಗೆದುಕೊಂಡ ತೀರ್ಮಾನವಾಗಿದೆ. ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದೆವು. ದ್ವಾಪರ ಯುಗದಲ್ಲಿ ಶ್ರೀರಾಮನಿದ್ದಂತೆ ಕಲಿಯುಗದ ಶ್ರೀರಾಮಚಂದ್ರ ಸಿಎಂ ಬಸವರಾಜ ಬೊಮ್ಮಾಯಿ ಆಗಿದ್ದಾರೆ. ದಲಿತ ಸಮುದಾಯಕ್ಕೆ ನ್ಯಾಯ ಕೊಟ್ಟಿದ್ದಾರೆ. ಎಷ್ಟು ದಿನ ನಾವು ಬದುಕಿರುತ್ತೇವೆಯೋ ಅಷ್ಟು ದಿನ ಈ ತೀರ್ಮಾನವನ್ನು ಮರೆಯುವಂತಿಲ್ಲ ಎಂದು ಶ್ಲಾಘಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆವತ್ತು ವಾಲ್ಮೀಕಿ ಜಯಂತಿ ಆಗಬೇಕು ಎಂದು ಜಯಂತಿ ಘೋಷಣೆ ಮಾಡಿದ್ದರು. ಇದೀಗ ಮೀಸಲಾತಿ ಹೆಚ್ಚಿಸಿದ ಸಿಎಂ ಬೊಮ್ಮಾಯಿ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ. ಆಗಿನ ಪಿಎಂ ಅಟಲ್ ಬಿಹಾರಿ ವಾಜಪೇಯಿ ಅವರು ಪರಿಶಿಷ್ಟ ಸಮುದಾಯಕ್ಕೆ ಪ್ರತ್ಯೇಕ ಸಚಿವಾಲಯ ಮಾಡಿದ್ದರು. ಸಿಎಂ ಬೊಮ್ಮಾಯಿ ಶ್ರೀರಾಮುಲು ಅವರೇ ನಿಮ್ಮ ಸಮುದಾಯದ ಬೇಡಿಕೆ ಇದೆ. ನಿಮ್ಮ ಸಮುದಾಯಕ್ಕೆ ಪ್ರತ್ಯೇಕ ಸಚಿವಾಲಯ ಆಗಬೇಕು ಎಂದು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಮಾಡಿದರು. ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬರಬೇಕು ಎಂದು ಎಸ್ ಸಿ ಸಮುದಾಯದ ಇಲಾಖೆಗೆ ಶ್ರೀರಾಮುಲುರನ್ನು ಸಚಿವರನ್ನಾಗಿ ಮಾಡಿದರು ಎಂದರು.
ಅನೇಕ ಸರ್ಕಾರಗಳು ಬಂದವು ಹೋದವು, ವರದಿ ತರಿಸಿಕೊಂಡರು. ಆದರೆ ಮೀಸಲಾತಿ ಹೆಚ್ಚಳ ಮಾಡಲು ಆಗಿಲ್ಲ. ನಮ್ಮ ಸಿಎಂ ಆ ರೀತಿ ಮಾಡಲಿಲ್ಲ. ಆವತ್ತು ಹೇಳಿದ್ದೆ ನಮ್ಮ ಸರ್ಕಾರ ಬರಬೇಕು. ಬಿಜೆಪಿಯ ಈ ರಾಮುಲು ಕೊಟ್ಟ ಮಾತಿಗೆ ಬದ್ಧನಾಗಿರುತ್ತೇನೆ ಅಂದಿದ್ದೆ. ಅದಕ್ಕಾಗಿ ನನ್ನನ್ನು ಗೇಲಿ ಮಾಡಿದರು, ತಮಾಷೆ ಮಾಡಿದರು. ಆದರೆ ನಾನು ತಾಳ್ಮೆಯಿಂದ ಇದ್ದೆ. ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದೆ. ನಮಗೆ ಮೀಸಲಾತಿ ಹೆಚ್ಚಿಸಿ ಸಿಎಂ ಸಿಹಿ ಕೊಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಸಿಎಂರನ್ನು ಶ್ರೀರಾಮಚಂದ್ರನಿಗೆ ಹೋಲಿಸಿದ ಶ್ರೀರಾಮುಲು: ತಮ್ಮ ಭಾಷಣದುದ್ದಕ್ಕೂ ಸಚಿವ ಶ್ರೀರಾಮುಲು ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಶ್ರೀರಾಮಚಂದ್ರನಿಗೆ ಹೋಲಿಕೆ ಮಾಡಿ ಮಾತನಾಡಿದರು. ಶ್ರೀರಾಮಚಂದ್ರನ ತರ ನಮ್ಮ ಸಿಎಂ ಸತ್ಯವಂತರು. ಸಮುದಾಯಕ್ಕೆ ನ್ಯಾಯ ಒದಗಿಸಿದ್ದಾರೆ. ನೀತಿ ಧರ್ಮ ಪಾಲಿಸುವ ವ್ಯಕ್ತಿ ಸಿಎಂ ಬೊಮ್ಮಾಯಿ. ಬೇರೆ ಕುಲದಲ್ಲಿ ಹುಟ್ಡಿದರೂ ಕಾಯಕವೇ ಕೈಲಾಸ ಎಂಬಂತೆ ಬಸವಣ್ಣನ ತತ್ವವನ್ನು ಅನುಸರಿಸುತ್ತಿದ್ದಾರೆ. ಸಿಎಂ ಬೊಮ್ಮಾಯಿ ಕಲಿಯುಗದ ಬಸವಣ್ಣ ಎಂದು ಹಾಡಿ ಹೊಗಳಿದರು.
ಗೇಲಿ, ತಮಾಷೆ ಮಾಡಿದವರಿಗೆ ಟಾಂಗ್: ಮೀಸಲಾತಿ ಬಗ್ಗೆ ಶ್ರೀರಾಮುಲು ಬಗ್ಗೆ ಗೇಲಿ ಮಾಡುತ್ತೀರಿ, ತಮಾಷೆ ಮಾಡಿದ್ದೀರಿ. ಈಗ ಎಲ್ಲಿ ಇದ್ದೀರಾ? ಸಾಮಾಜಿಕ ಜಾಲತಾಣದಲ್ಲಿ ತಮಾಷೆ ಮಾಡುತ್ತಿದ್ದಿರಿ ಎಂದು ಸಿದ್ದರಾಮಯ್ಯರಿಗೆ ಪರೋಕ್ಷವಾಗಿ ಸಚಿವ ಶ್ರೀರಾಮುಲು ತಿರುಗೇಟು ನೀಡಿದರು.
ಕಾಂಗ್ರೆಸ್ ನವರು 2016ರಲ್ಲಿ ಅಹಿಂದ ಮುಖವಾಡ ಇಟ್ಟಿದ್ದರು. ನಿಮಗೆ ಶಕ್ತಿ ಇದ್ದರೆ ಮೀಸಲಾತಿ ಕೊಡಬಹುದಿತ್ತು. ಆದರೆ ಮುಖವಾಡ ಹಾಕಿ ಸಮುದಾಯದವರಿಗೆ ಮೋಸ ಮಾಡಿದ್ದಾರೆ. ಬೊಮ್ಮಾಯಿ ಅವರದ್ದು ಮೂರ್ತಿ ಚಿಕ್ಕದು ಕೀರ್ತಿ ದೊಡ್ಡದು. ಅವರಿಗೆ ಜಗತ್ತನ್ನು ಗ್ರಹಿಸುವ ಶಕ್ತಿ ಇದೆ. ಪ.ಜಾತಿ ಅವರು ವಿಧಾನಸೌಧ ಮೆಟ್ಟಿಲು ನಿಂತಿದ್ದೇವಾ?. ಸಿಎಂ ಬೊಮ್ಮಾಯಿ, ಮಠಾಧೀಶರ ಕೃಪೆಯಿಂದ ನಾವು ಇಂದು ಇಲ್ಲಿ ನಿಂತಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ.. ಎಸ್ಸಿ ಎಸ್ಟಿ ಸಮುದಾಯಗಳಿಗೆ ಆತ್ಮಗೌರವ, ಸ್ವಾಭಿಮಾನದ ಬದುಕು ಕಲ್ಪಿಸಲು ಬದ್ಧ: ವಾಲ್ಮೀಕಿ ಜಯಂತಿ ವೇಳೆ ಸಿಎಂ ಭರವಸೆ