ಬೆಂಗಳೂರು: ರಾಜ್ಯದಲ್ಲಿ 2 ಒಮಿಕ್ರೋನ್ ಕೇಸ್ ಪತ್ತೆಯಾಗಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ. ಸರ್ಕಾರ ಈ ಬಗ್ಗೆ ಕಟ್ಟೆಚ್ಚರ ವಹಿಸಿದೆ ಎಂದು ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದರು.
ವಿಕಾಸಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಮಿಕ್ರೋನ್ ವೈರಸ್ನಿಂದ ಸಮಸ್ಯೆ ಹೇಗೆ ಬರಲಿದೆ ಎಂಬುದರ ಬಗ್ಗೆ ಅಧ್ಯಯನ ಮಾಡಲಾಗಿದೆ. ಜೀವಕ್ಕೆ ಅಪಾಯವಿಲ್ಲ ಎಂದರು.
ಒಮಿಕ್ರೋನ್ ಬೇರೆ ಬೇರೆ ದೇಶದಲ್ಲಿ ಈಗಾಗಲೇ ಕಾಣಿಸಿಕೊಂಡಿದೆ. ಕೇವಲ ದೈಹಿಕವಾಗಿ ಸೋರ್‌ನೆಸ್, ಮಾಂಸ ಕಂಡ ನೋವು ಕಾಣಿಸಿಕೊಳ್ಳಲಿದೆ. 11 ದೇಶಗಳ ಸ್ಥಿತಿಗತಿ ನೋಡಿಕೊಂಡು ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ಜೀವಕ್ಕೆ ಅಪಾಯ ಇಲ್ಲ:
ಈ ಹೊಸ ತಳಿ ವೇಗವಾಗಿ ಹರಡುತ್ತದೆ. ಆದರೆ, ಜೀವಕ್ಕೆ ಅಪಾಯ ಇಲ್ಲ. ಸರ್ಕಾರ ಕಟ್ಟೆಚ್ಚರ ವಹಿಸಿದೆ. ಬೇರೆ ಬೇರೆ ದೇಶಕ್ಕೆ ಹರಡುವುದನ್ನು ತಡೆಗಟ್ಟುವ ಕೆಲಸ ಆಗುತ್ತಿದೆ. ಕಡ್ಡಾಯವಾಗಿ ತಪಾಸಣೆ ಆಗಿದ್ದರೂ, ರಿಪೋರ್ಟ್ ಬರೋವರೆಗೂ ಅವರನ್ನು ಕಳುಹಿಸುವುದಿಲ್ಲ. ನೆಗೆಟಿವ್ ರಿಪೋರ್ಟ್ ಬಂದ ಬಳಿಕ ಕಳಿಸಲಾಗುವುದು ಎಂದು ಹೇಳಿದರು.
ಮಹಾರಾಷ್ಟ್ರದಿಂದ ಬರುತ್ತಿರುವವರಿಗೆ RTPCR ಟೆಸ್ಟ್ ಕಡ್ಡಾಯ. ನೆಗೆಟಿವ್ ಬಂದವರಿಗೆ ಮಾತ್ರ ಒಳಗೆ ಬಿಟ್ಟು ಕೊಳ್ಳಲಾಗುವುದು ಎಂದರು.
ಅಧಿವೇಶನ ನಡೆಸುವ ಬಗ್ಗೆ ಸಿಎಂ ನಿರ್ಧಾರ:
ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆ. ವಿಧಾನಸೌಧದ ಸಚಿವಾಲಯ ಸಿಬ್ಬಂದಿಯಿಂದಲೂ ಅಧಿವೇಶನ ಬೇಡ ಅಂತ ಹೇಳಿದ್ದಾರೆ.
ಸಿಎಂ ಕೂಡ ಗಮನ ಹರಿಸೋಣ ಅಂತ ಹೇಳಿದ್ದಾರೆ. ಸವಾಲು ಮತ್ತು ಬೇಡಿಕೆ ಎರಡೂ ಇದೆ. ದೆಹಲಿಯಿಂದ ಮುಖ್ಯಮಂತ್ರಿಗಳು ಬಂದ ನಂತರ ವಿಧಾನಸಭೆಯ ಸ್ಪೀಕರ್ ಹಾಗೂ ಪರಿಷತ್ ಸಭಾಪತಿ ಅವರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಒಮಿಕ್ರೋನ್ ವೈರಸ್ ಬಗ್ಗೆ ಹೆಚ್ಚಿನ ಭಯ ಬೇಡ. 2 ಡೋಸ್ ವ್ಯಾಕ್ಸಿನ್ ಪಡೆದುಕೊಳ್ಳಿ. ಕೆಲಸ ಮಾಡುವ ಪ್ರತಿಯೊಬ್ಬರೂ ಲಸಿಕೆ ಪಡೆಯುವುದು ಕಡ್ಡಾಯ. ಮುಂದಿನ ದಿನ ಮಾಲ್, ಥಿಯೇಟರ್ಗೆ ಬರುವವರಿಗೆ ಲಸಿಕೆ ಕಡ್ಡಾಯ ಮಾಡಲಿದ್ದೇವೆ ಎಂದು ಹೇಳಿದರು.