ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ತೀವ್ರವಾಗಿದ್ದ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಸಂಸಾರ ಮತ್ತು ಕಷ್ಟಗಳನ್ನು ಮರೆತು ಸಮಾಜದ ಒಳಿತನ್ನು ಗಮನದಲ್ಲಿಟ್ಟುಕೊಂಡು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಆರೋಗ್ಯ ಕಾರ್ಯಕರ್ತರು ಮತ್ತು ಸಿಬ್ಬಂದಿಯನ್ನು ಗೌರವಿಸುವುದು ಎಲ್ಲರ ಹೊಣೆಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.
ನಗರದ ಮಲ್ಲೇಶ್ವರಂನಲ್ಲಿರುವ ರೋಟರಿ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕೋವಿಡ್ ಸಾಂಕ್ರಾಮಿಕಕ್ಕೆ ತುತ್ತಾಗಿ ಮೃತರಾದ ಆರೋಗ್ಯ ಕಾರ್ಯಕರ್ತರ ವಾರಸುದಾರರಿಗೆ ಪರಿಹಾರ ಚೆಕ್ ವಿತರಿಸಿ ಮಾತನಾಡಿದರು. ಕೋವಿಡ್ ವ್ಯಾಪಕವಾಗಿ ಹಬ್ಬಲು ಆರಂಭಿಸಿದ ವಿಷಮ ಸಂದರ್ಭದಲ್ಲಿ ನಮ್ಮ ಆರೋಗ್ಯ ವ್ಯವಸ್ಥೆಯ ಇತಿಮಿತಿಗಳನ್ನು ತೋರಿಸಿತು. ಈ ವೇಳೆ ಎಚ್ಚೆತ್ತುಕೊಂಡ ಸರಕಾರವು ಸಮಾರೋಪಾದಿಯಲ್ಲಿ ಈ ಸಮಸ್ಯೆಯನ್ನು ಪರಿಹರಿಸಿತು.
ಇದನ್ನೂ ಓದಿರಿ: ಮುಂದಿನ ವಾರವೂ ಬಿಜೆಪಿ ವಿರುದ್ಧ ಸಮರಕ್ಕೆ ಸಿದ್ಧಗೊಂಡಿದೆ ಕಾಂಗ್ರೆಸ್.. ಸದನದಲ್ಲಿ ಕೋಲಾಹಲ ಸಾಧ್ಯತೆ..
ಆ ದಿನಗಳಲ್ಲಿ ಆರೋಗ್ಯ ಕಾರ್ಯಕರ್ತರು ತಮ್ಮ ಜೀವದ ಹಂಗು ತೊರೆದು ಸಮರ್ಪಣಾ ಭಾವದಿಂದ ಕರ್ತವ್ಯದಲ್ಲಿ ತೊಡಗಿಸಿಕೊಂಡರು ಎಂದು ಕೊಂಡಾಡಿದರು. ಯಾವುದೇ ವೈರಾಣು ಹಬ್ಬತೊಡಗಿದಾಗ ಗಂಟಲಿನಲ್ಲಿ ಕಫ ಕಟ್ಟುವುದು ಅಪಾಯದ ಮುನ್ಸೂಚನೆಯಾಗಿದೆ. ಸಾರ್ವಜನಿಕರು ಇಂತಹ ಸಂದರ್ಭದಲ್ಲಿ ಉದಾಸೀನ ಮಾಡದೆ ತಕ್ಷಣವೇ ರಕ್ತ ಮತ್ತು ಕಫ ಹಾಗೂ ಗಂಟಲ ದ್ರವ ಮುಂತಾದವನ್ನು ಪರೀಕ್ಷೆ ಮಾಡಿಸಿಕೊಂಡು, ಮುಂಜಾಗ್ರತೆ ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲೇ ಇಂತಹ ಎಲ್ಲ ಬಗೆಯ ಪರೀಕ್ಷೆಗಳನ್ನೂ ನಡೆಸುವ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಜನರು ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಚಿವ ಅಶ್ವತ್ಥನಾರಾಯಣ ಇದೇ ವೇಳೆ ಕರೆ ನೀಡಿದರು.