ಮಹದೇವಪುರ, ಬೆಂಗಳೂರು: ನಗರದ ಕನ್ನಮಂಗಲದಲ್ಲಿ 70 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಉದ್ಯಾನ ನಗರಿಯಲ್ಲಿ ಎರಡನೇ ಸಸ್ಯ ಕಾಶಿ ನಿರ್ಮಾಣಗೊಂಡಿದೆ. ಸುಮಾರು 70 ಎಕರೆ ವಿಸ್ತೀರ್ಣದಲ್ಲಿ 5.5 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ಈ ಮಿನಿ ಲಾಲ್ಬಾಗ್ನಲ್ಲಿ 3,900 ಸಾವಿರ ಗಿಡ, ಮರಗಳನ್ನು ಒಳಗೊಂಡಿದೆ 3 ಕಿ.ಮೀ ವಾಕಿಂಗ್ ಟ್ರ್ಯಾಕ್ ನಿರ್ಮಿಸಲಾಗಿದೆ.
ಇದನ್ನು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉದ್ಘಾಟನೆ ಮಾಡಲಿದ್ದಾರೆ. ಮೂರು ಕಿಲೋಮೀಟರ್ ಜಾಗಿಂಗ್ ಟ್ರ್ಯಾಕ್, ಐದು ಕೊಳಗಳು ಮತ್ತು ಮಾನವ ನಿರ್ಮಿತ ಸರೋವರ, ಕುಡಿಯುವ ನೀರಿನ ಘಟಕ, ಉತ್ತಮ ಶೌಚಾಲಯ, ಕುಳಿತುಕೊಳ್ಳಲು ಹುಲ್ಲಿನ ಹಾಸುಗಳು ಇವೆಲ್ಲವೂ ಆಕರ್ಷಣೀಯವಾಗಿವೆ.
ಸಾರ್ವಜನಿಕರು, ವಾಯು ವಿಹಾರಿಗಳು ವಿರಾಮ ಪಡೆಯಲು ವಿಶಾಲವಾದ ಜಾಗ , ಕಲ್ಲಿನ ಬೆಂಚುಗಳು, ಪ್ರೀತಿಯ ಬೆಂಗಳೂರಿಗರನ್ನು ಜೂನ್ 30ರಿಂದ ಸ್ವಾಗತಿಸಲು ಸಜ್ಜಾಗಿದೆ. ಪೂರ್ವ ಲಾಲ್ ಬಾಗ್ ಎಂದು ಕರೆಯಲ್ಪಡುವ ಕನ್ನಮಂಗಲದ 70 ಎಕರೆ ಸಸ್ಯೋದ್ಯಾನ ಕೆಲವು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿಪಡಿಸಿದ ಹಲವಾರು ವರ್ಷಗಳ ನಂತರ ಸಾರ್ವಜನಿಕರಿಗೆ ಉಪಯೋಗವಾಗುವ ನಾಲ್ಕು ಪರಿಸರ ಉದ್ಯಾನವನಗಳಲ್ಲಿ ಇದು ಮೊದಲನೆಯದು.
ಈ ಮಿನಿ ಲಾಲ್‌ಬಾಗ್ ಬೆಂಗಳೂರು ನಗರದಿಂದ ಸುಮಾರು 25 ಕಿ.ಮೀ ಮತ್ತು ಹೊಸಕೋಟೆಯಿಂದ 8 ಕಿ.ಮೀ ದೂರದಲ್ಲಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಪೂರ್ವ ತಾಲೂಕಿನಲ್ಲಿ ಪ್ರವಾಸಿಗರ ನೆಚ್ಚಿನ ತಾಣವಾಗಲಿದೆ.
ಇಲಾಖೆಯು ಅಭಿವೃದ್ಧಿಪಡಿಸುತ್ತಿರುವ ನಾಲ್ಕು ಸಸ್ಯೋದ್ಯಾನಗಳಲ್ಲಿ ಈ ಉದ್ಯಾನವನವು ಮೊದಲನೆಯದಾಗಿದ್ದು, ಇನ್ನುಳಿದಂತೆ ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು ಮತ್ತು ಸಿರ್ಸಿ ಯಲ್ಲಿ ನಿರ್ಮಾಣ ಮಾಡಲಾಗುತ್ತದೆ. ಕರ್ನಾಟಕದ ಮೊದಲ ಬೊಟಾನಿಕಲ್ ಗಾರ್ಡನ್ ಆಗಿರುವ ಇದು ಲಾಲ್ಬಾಗ್ನ ಪ್ರತಿರೂಪದ ಮಾದರಿಯಲ್ಲಿ ಉದ್ಯಾನವನವನ್ನು ಸಿದ್ದಪಡಿಸಲಾಗುತ್ತಿದೆ.
ಚಿಟ್ಟೆ ಉದ್ಯಾನ ಮತ್ತು ಗುಲಾಬಿ ಉದ್ಯಾನವನಕ್ಕೆ ಮನವಿ
ಮಿನಿ ಲಾಲ್ಬಾಗ್ಗೆ ರಾಜ್ಯ ಸರ್ಕಾರ 5.5 ಕೋಟಿ ರೂಪಾಯಿ ನೀಡಿದೆ. ಉದ್ಯಾನವನದಲ್ಲಿ 2,800 ತೆಂಗಿನಮರಗಳು ಹಾಗೂ 230 ಗೋಡಂಬಿ ಮರಗಳು ಸೇರಿದಂತೆ, ಹಲಸು, ನೇರಳೆ, ಹುಣಸೆ ಮುಂತಾದ ಮರಗಳಿವೆ. ಔಷಧಿ ಮತ್ತು ಸುಗಂಧಿತ ಗಿಡಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ವಿವಿಧ ಜಾತಿಯ ತೆಂಗಿನ ಮರಗಳ ನಡುವೆ ಮಿಶ್ರ ಬೆಳೆ ಮತ್ತು 20 ವಿವಿಧ ದೇಶಗಳಿಂದ ಥೀಮ್ ಆಧಾರಿತ ಗಿಡಗಳನ್ನು ತಂದು ತೋಟವನ್ನು ನಿರ್ಮಿಸಲು ತೋಟಗಾರಿಕೆ ಇಲಾಖೆ ಯೋಜಿಸಿದೆ.
ಉದ್ಯಾನವನದೊಳಗೆ ಖಾಲಿ ಇರುವ ಜಾಗದಲ್ಲಿ ಚಿಟ್ಟೆ ಉದ್ಯಾನ ಮತ್ತು ಗುಲಾಬಿ ಉದ್ಯಾನವನವನ್ನು ರಚಿಸಲು ಸಾರ್ವಜನಿಕರು ತೋಟಗಾರಿಕೆ ಇಲಾಖೆಗೆ ಮನವಿ ಮಾಡಿದ್ದಾರೆ. ಈ ಉದ್ಯಾನವನವು ಪ್ರಾರಂಭವಾದರೆ 60 ಸಾವಿರದಿಂದ 80 ಸಾವಿರ ನಿವಾಸಿಗಳು ಇದರ ಉಪಯೋಗವನ್ನು ಪಡೆದುಕೊಳ್ಳುತ್ತಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಇದನ್ನೂ ಓದಿ: 65 ಇನ್ಸ್ಪೆಕ್ಟರ್ಗಳನ್ನು ಎತ್ತಂಗಡಿ ಮಾಡಿದ ರಾಜ್ಯ ಪೊಲೀಸ್ ಇಲಾಖೆ
ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಬೆಂಗಳೂರಿನ ಮಿನಿ ಲಾಲ್ ಬಾಗ್, ಕಾಡುಗೋಡಿಯ 22 ಎಕರೆಯ ಟ್ರೀ ಪಾರ್ಕ್ ಹಾಗೂ ನಿಂಬೆಕಾಯಿಪುರದ ಜನಪದರು ರಂಗಮಂದಿರವನ್ನು ಉದ್ಘಾಟಿಸುವ ಹಿನ್ನೆಲೆಯಲ್ಲಿ ಸಚಿವ ಅರವಿಂದ ಲಿಂಬಾವಳಿ ಉದ್ಘಾಟನೆಗೆ ಸಿದ್ಧವಾಗಿರುವ ಸ್ಥಳ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದ್ದಾರೆ.