ಬೆಂಗಳೂರು: ಕೋವಿಡ್ ಕಾರಣಕ್ಕೆ ಸೇವೆಯನ್ನು ಕಡಿತ ಗೊಳಿಸಿದ್ದ ನಮ್ಮ ಮೆಟ್ರೋ ನಿಗಮ ಇಂದಿನಿಂದ ರೈಲು ಸೇವೆಯ ಅವಧಿಯನ್ನು ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯೂ (ಬಿಎಂಟಿಸಿ) ಮೆಟ್ರೋ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಮುಖ ಮೆಟ್ರೋ ನಿಲ್ದಾಣಗಳಿಂದ ಮೆಟ್ರೋ ಫೀಡರ್ ಸಾರಿಗೆ ಸೌಲಭ್ಯವನ್ನು ತಡರಾತ್ರಿಯವರೆಗೆ ಒದಗಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸಮರ್ಪಕ ಸುರಕ್ಷಿತ ಸಾರಿಗೆ ಸೇವೆಯನ್ನು ಮಿತವ್ಯಯದ ದರದಲ್ಲಿ ಒದಗಿಸುತ್ತಿದೆ. ಸಂಸ್ಥೆಯು ವಿವಿಧ ಮಾರ್ಗಗಳಲ್ಲಿ ಸಾರ್ವಜನಿಕ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಸಾರಿಗೆ ಸೇವೆ ನೀಡುತ್ತಿರುವುದಾಗಿ ತಿಳಿಸಿದೆ.
ಮುಂದಿನ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಮತ್ತು ಬೇಡಿಕೆಯನ್ನು ಪರಿಶೀಲಿಸಿ ಮೆಟ್ರೋ ಫೀಡರ್ ಸೇವೆಗಳನ್ನು ಒದಗಿಸಲಿದ್ದೇವೆ. ತಡರಾತ್ರಿ ಸೇವೆಗಳ ಸ್ವರೂಪದಲ್ಲಿ ಮುಂದಿನ ದಿನಗಳಲ್ಲಿ ಅಗತ್ಯ ಬದಲಾವಣೆ ಮಾಡಲಿದ್ದೇವೆ ಎಂದು ಬಿಎಂಟಿಸಿ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದೆ.