ಬೆಂಗಳೂರು: ಬೆಸ್ಕಾಂನಿಂದ ಜನಸಾಮಾನ್ಯರಿಗೆ ಹೊಸ ಡೆಪಾಸಿಟ್ ಆಘಾತ ಎದುರಾಗಿದೆ. ಈ ಡೆಪಾಸಿಟ್ ಹಣವನ್ನು ಪಾವತಿ ಮಾಡದೇ ಇದ್ದರೆ ಅಂಥವರ ಮನೆಯ ಪವರ್ ಕಟ್ ಆಗಲಿದೆ. ಬೆಸ್ಕಾಂನಿಂದ ಬಿಲ್ ದರ ಹೆಚ್ಚಳ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರಿಂದ ವಿದ್ಯುತ್ ದರವನ್ನು ಕೂಡ ಏರಿಕೆ ಮಾಡಲಾಗಿತ್ತು. ಆದರೆ ಇದೀಗ ಮತ್ತೆ ಬೆಸ್ಕಾಂ ಡೆಪಾಸಿಟ್ ದರವನ್ನು ಕೂಡಾ ಏರಿಕೆ ಮಾಡುವುದಕ್ಕೆ ಮುಂದಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಭದ್ರತಾ ಠೇವಣಿಯನ್ನು ಕೂಡ ಬೆಸ್ಕಾಂ ಹೆಚ್ಚಿಸಿದೆ. ಕೆ.ಇ.ಆರ್.ಸಿ ಆದೇಶದಂತೆ ಡೆಪಾಸಿಟ್ ಶುಲ್ಕ ಹೆಚ್ಚಿಸಿ ಹಣ ಪಾವತಿಸುವಂತೆ ಸೂಚನೆ ನೀಡಿದೆ. ಕಳೆದ 12 ತಿಂಗಳ ಒಟ್ಟು ವಿದ್ಯುತ್ ಶುಲ್ಕದ ಮಾಸಿಕ ಸರಾಸರಿ ಪಡೆಯಲಾಗುತ್ತದೆ. ನಂತರ 2 ತಿಂಗಳ ಸರಾಸರಿ ಶುಲ್ಕವನ್ನು ಭದ್ರತಾ ಠೇವಣಿ ರೀತಿಯಲ್ಲಿ ಸಂಗ್ರಹಿಸಲಾಗುತ್ತದೆ. ಅವಧಿ ಮುಗಿಯುವ ಒಳಗೆ ಹೆಚ್ಚುವರಿ ಭದ್ರತಾ ಠೇವಣಿ ಪಾವತಿಸದಿದ್ದರೆ ಅಂಥವರ ಮನೆಯ ಪವರ್ ಕಟ್ ಮಾಡುವುದಕ್ಕೆ ಬೆಸ್ಕಾಂ ಆದೇಶ ನೀಡಿದೆ.
ಓದಿ: ಕೆಟ್ಟ ಟ್ರಾನ್ಸ್ಫಾರ್ಮರ್ಗಳಿಗೆ ಮುಕ್ತಿ: ಪಾದಚಾರಿ ರಸ್ತೆಯ ಟಿಸಿ ಸ್ಥಳಾಂತರಕ್ಕೆ ಬೆಸ್ಕಾಂ ನಿರ್ಧಾರ
30 ದಿನಗಳ ಡೆಡ್ ಲೈನ್: ವಿದ್ಯುತ್ ಮೀಟರ್ ಇರುವ ಪ್ರತಿಯೊಂದು ಮನೆಗೂ 30 ದಿನಗಳ ಡೆಡ್ ಲೈನ್ ನೀಡಿದ್ದು, ಈ ಅವಧಿಯಲ್ಲಿ ಬಿಲ್ ಪಾವತಿಸದೆ ಹೋದರೆ ಮನೆಯ ಪವರ್ ಕಟ್ ಆಗಲಿದೆ. ಉದಾಹರಣೆಗೆ ಒಂದು ಮನೆಯ ವಿದ್ಯುತ್ ಬಿಲ್ 500 ರೂ. ಬಂದರೆ ಅವರು 1000 ಸಾವಿರ ರೂಪಾಯಿ ಠೇವಣಿ ಹಣ ಪಾವತಿಸಬೇಕು. ಇಲ್ಲವಾದರೆ ವಿದ್ಯುತ್ ಸಂಪರ್ಕ ಕಟ್ ಮಾಡುವುದಾಗಿ ಬೆಸ್ಕಾಂ ಹೇಳಿದೆ.
ಜನಸಾಮಾನ್ಯರಿಗೆ ಹೆಚ್ಚಿದ ಹೊರೆ: ಭದ್ರತಾ ಠೇವಣಿ ಹೆಚ್ಚಳ ಸೂಚನೆ ನೀಡಿರುವ ಬೆನ್ನಲ್ಲೇ ಜನಸಾಮಾನ್ಯರಿಗೆ ಹೊರೆಯಾಗಲಿದೆ. ಈಗಾಗಲೇ ಅನೇಕ ವಸ್ತುಗಳ ಬೆಲೆ ಏರಿಕೆ ಆಗಿದೆ. ಇದರ ಮಧ್ಯೆ ಈ ಠೇವಣಿ ಶುಲ್ಕ ಅವಶ್ಯಕತೆ ಇಲ್ಲ ಅಂತಿದ್ದಾರೆ ಜನಸಾಮಾನ್ಯರು.