ಬೆಂಗಳೂರು: ಸಾಯ್ತಿನಿ ಸಾಯ್ತಿನಿ ಎಂದು ಹೆದರಿಸಲು ಹೋಗಿ ಮಾನಸಿಕ ಅಸ್ವಸ್ಥನೋರ್ವ ಕ್ಷಣಾರ್ಧದಲ್ಲೇ ಪ್ರಾಣ ಕಳೆದುಕೊಂಡಿರುವ ಘಟನೆ ಮೆಜೆಸ್ಟಿಕ್ ರೈಲು ನಿಲ್ದಾಣದ ಬಳಿ ನಡೆದಿದೆ.
ಸಾವನ್ನಪ್ಪಿರುವ ವ್ಯಕ್ತಿಯ ಕುರಿತಾದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈತ ನಿಂತಿದ್ದ ರೈಲನ್ನು ಏರಿ ಸಾಯುವುದಾಗಿ ಬೆದರಿಸುತ್ತಿದ್ದನಂತೆ. ಆಗ ಸ್ಥಳದಲ್ಲಿದ್ದವರು ಆತನನ್ನ ಕೆಳಗಿಳಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಮಾನಸಿಕ ಅಸ್ವಸ್ಥ ಹೈಟೆನ್ಷನ್ ವೈರ್ಗೆ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ ಎಂದು ಅಲ್ಲಿನ ಜನರು ತಿಳಿಸಿದ್ದಾರೆ.
ಇನ್ನು ಈತ ಮಾನಸಿಕ ಅಸ್ವಸ್ಥನಾಗಿದ್ದು, ಮೆಜೆಸ್ಟಿಕ್ ಸುತ್ತಮುತ್ತ ತಿರುಗುತ್ತಿದ್ದನಂತೆ. ಆದರೆ ಇಂದು ಏಕಾಏಕಿ ಆತ್ಮಹತ್ಯೆ ಬೆದರಿಕೆ ಹಾಕಿ ಪ್ರಾಣ ಬಿಟ್ಟಿದ್ದಾನೆ. ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತನ ಕುಟುಂಬ ಪತ್ತೆ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ.