ಬೆಂಗಳೂರು: ಕೊರೊನಾ ಪ್ರತಿಯೊಬ್ಬರ ಜೀವನದಲ್ಲಿಯೂ ಬದಲಾವಣೆ ಹೊತ್ತು ತಂದಿದೆ. ಲಾಕ್ಡೌನ್ ವೇಳೆ ಕೌಟುಂಬಿಕ ಕಲಹಗಳು ಹೆಚ್ಚಾಗಿದ್ದವು. ಸದ್ಯ ಕಮಿಷನರ್ ಕಚೇರಿಯ ಆವರಣದಲ್ಲಿರುವ ವನಿತಾ ಸಹಾಯವಾಣಿಗೆ ದಿನಕ್ಕೆ ನೂರಾರು ದೂರುಗಳು ಬರುತ್ತವೆ.
ಮೊದಮೊದಲು ಗಂಡನ ಕಿರುಕುಳವೆಂದು ಪತ್ನಿಯರು ಕರೆ ಮಾಡಿ ದೂರು ನೀಡುತ್ತಿದ್ದರು. ಇದರ ಜೊತೆಗೆ ಕೆಲವರು ನನ್ನ ಪತ್ನಿಗೆ ಬುದ್ಧಿ ಹೇಳಿ ಅಂತ ಮನವಿ ಮಾಡುತ್ತಿದ್ದಾರಂತೆ. ಇದರ ಕುರಿತು ಸ್ವತಃ ವನಿತಾ ಸಹಾಯವಾಣಿ ಮುಖ್ಯಸ್ಥೆ ರಾಣಿ ಶೆಟ್ಟಿ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಸದ್ಯ ಬಹಳಷ್ಟು ಜನ ಮನೆಯಲ್ಲಿ ವರ್ಕ್ ಫ್ರಂ ಹೋಂ ಮಾಡುತ್ತಿದ್ದಾರೆ. ಈ ವೇಳೆ ಗಂಡ ಹೆಂಡತಿ ಸಣ್ಣ-ಪುಟ್ಟ ವಿಚಾರಕ್ಕೆ ಜಗಳವಾಡಿ ಪತ್ನಿ ಹಿಂಸೆ ತಾಳಲಾರದೆ ಕೇವಲ ಮಹಿಳೆಯರ ಸಮಸ್ಯೆ ಆಲಿಸುತ್ತೀರಾ.. ದಯವಿಟ್ಟು ನಮ್ಮ ಸಮಸ್ಯೆಯನ್ನೂ ಸ್ವಲ್ಪ ಕೇಳಿ ಎಂದು ಪುರುಷರು ವನಿತಾ ಸಹಾಯವಾಣಿಗೆ ಕರೆ ಮಾಡಿ ದೂರು ಸಲ್ಲಿಸುತ್ತಿದ್ದಾರಂತೆ.
ಡಿಜಿಟಲ್ ಕೌನ್ಸಿಲ್ ಮಾಡಲು ಸಿದ್ಧತೆ:
ವನಿತಾ ಸಹಾಯವಾಣಿಗೆ ದಿನಕ್ಕೆ ಬಹಳಷ್ಟು ಕರೆಗಳು ಬರುತ್ತಿವೆ. ಕೊರೊನಾ ಸೋಂಕು ಇರುವುದರಿಂದ ಪ್ರತಿಯೊಬ್ಬರನ್ನೂ ಕರೆದು ವಿಚಾರಣೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ, ವಿಡಿಯೊ ಕರೆ ಮುಖಾಂತರ ಕೌನ್ಸಿಲಿಂಗ್ ಮಾಡಲು ತಯಾರಿ ನಡೆಸಲಾಗಿದೆ. ವನಿತಾ ಸಹಾಯವಾಣಿಯವರು ವಿಡಿಯೊ ಮೂಲಕ ದೂರುದಾರರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಹುದು ಎಂಬ ಕಾರಣದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ವನಿತಾ ಸಹಾಯವಾಣಿ ಮುಖ್ಯಸ್ಥೆ ರಾಣಿ ಶೆಟ್ಟಿ ಹೇಳುವ ಪ್ರಕಾರ, ಕೊರೊನಾದಿಂದ ಬಹಳಷ್ಟು ಮಂದಿ ಮನೆಯಲ್ಲಿದ್ದಾರೆ. ಗಂಡ-ಹೆಂಡತಿ ಅನ್ಯೋನ್ಯವಾಗಿ ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕು. ವಿನಾ ಕಾರಣ ಜಗಳ ಮಾಡಿ ನೆಮ್ಮದಿ ಹಾಳು ಮಾಡಿಕೊಳ್ಳಬಾರದು. ಹಾಗೆಯೇ ಸದ್ಯ ನಾವು ನಮ್ಮಿಂದ ಆದಷ್ಟು ಸಮಸ್ಯೆಯನ್ನ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.