ಬೆಂಗಳೂರು: ಎಲ್ಲಾ ಇಲಾಖೆ, ಜನಪ್ರತಿನಿಧಿಗಳ ಜತೆ ಇದೇ ವಾರ ಸಭೆ ನಡೆಸಿ ಕೆ.ಸಿ ವ್ಯಾಲಿಗೆ ಜಲಮಂಡಳಿ ಮೂಲಕ ನೀರು ಒದಗಿಸುವ ನಿಟ್ಟಿನಲ್ಲಿ ಚರ್ಚೆ ನಡೆಸುತ್ತೇನೆ ಎಂದು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ನಲ್ಲಿ ನಿಯಮ 330ರ ಅಡಿ ನಡೆದ ಚರ್ಚೆಯಲ್ಲಿ ಬಿಜೆಪಿ ಸದಸ್ಯ ವೈ.ಎ. ನಾರಾಯಣಸ್ವಾಮಿ ನಡೆಸಿದ ಚರ್ಚೆಗೆ ಉತ್ತರಿಸಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಒಟ್ಟು 120 ಕೆರೆಗಳನ್ನು ತುಂಬಿಸುವ ಮಹತ್ವದ ಯೋಜನೆ ಕೈಗೆತ್ತಿಕೊಂಡಿದ್ದ ಸರ್ಕಾರ ಶೇಕಡ 80ರಷ್ಟು ಕೆರೆಗಳನ್ನು ತುಂಬಿಸುವಲ್ಲಿ ಸಫಲವಾಗಿದೆ.
ಬಹಳ ನಿರೀಕ್ಷೆ ಇಟ್ಟು 400 ಎಂಎಲ್ಡಿ ನೀರನ್ನು ಎಚ್.ಎನ್. ವ್ಯಾಲಿಗೆ ನೀಡಲು 2016 ರಲ್ಲಿ ನಿರ್ಧರಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಅಷ್ಟು ನೀರು ಒದಗಿಸಲಾಗಿಲ್ಲ. ಜಲಮಂಡಳಿಯವರು 380 ಎಂಎಲ್ಡಿ ಸಂಸ್ಕರಿಸಿದ ನೀರನ್ನು ನೀಡುತ್ತಿದ್ದೇವೆ ಎಂದಿದ್ದಾರೆ. ಆದರೆ, 284 ಎಂಎಲ್ಡಿ ಮಾತ್ರ ಬರುತ್ತಿದೆ. ಮಹಾನಗರದಲ್ಲಿ ಒಳಚರಂಡಿ ತ್ಯಾಜ್ಯ ನೀರು ವ್ಯರ್ಥವಾಗಿ ಹರಿಯುತ್ತಿದೆ. ನಿರೀಕ್ಷಿತ ಮಟ್ಟದಲ್ಲಿ ನೀರು ಸಂಗ್ರಹ ಮಾಡಲು ಸಾಧ್ಯವಾಗುತ್ತಿಲ್ಲ. ಎಲ್ಲವನ್ನೂ ಸಂಗ್ರಹಿಸಿ ಸಂಸ್ಕರಿಸಿ ಎರಡು ಜಿಲ್ಲೆಯ ಕೆರೆ ತುಂಬಿಸುವ ಮಹತ್ವದ ಉದ್ದೇಶ ಹೊಂದಲಾಗಿತ್ತು ಅಷ್ಟೇ, ಎಲ್ಲಾ ಕೆರೆಯನ್ನೂ ಸಂಪೂರ್ಣ ತುಂಬಿಸುತ್ತೇವೆ ಎಂದಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆಲ ರೈತರು ನೀರು ಸಾಗುವ ಮಾರ್ಗದಲ್ಲಿ ಸಂಗ್ರಹಾಲಯ ನಿರ್ಮಿಸಿಕೊಂಡು ನೀರು ಸಂಗ್ರಹಿಸುತ್ತಿದ್ದಾರೆ. ನೀರು ಮುಂದುವರಿಸಲು ಸಾಧ್ಯವಾಗಿಲ್ಲ. ಕಡೆಯ ಹಂತದ ಹತ್ತಾರು ಕೆರೆ ತಲುಪಲು ಸಾಧ್ಯವಾಗಿಲ್ಲ. ನಿರಾಶರಾಗುವ ಅಗತ್ಯವಿಲ್ಲ ನಾವು ಜಲಮಂಡಳಿ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಜಿಲ್ಲೆಯ ಜನರ ಬಗ್ಗೆ ಕಾಳಜಿ ಹೊಂದಿ ಮಾತುಕತೆ ನಡೆಸುತ್ತಿದ್ದೇವೆ. ಆದಷ್ಟು ಶೀಘ್ರ ಕೊನೆಯವರೆಗೂ ನೀರು ತಲುಪಿಸುವ ಉದ್ದೇಶ ನಮ್ಮದಾಗಿದೆ. ಇದಕ್ಕಾಗಿ ರೈತರ ಸಹಕಾರವನ್ನು ಸಹ ಕೋರಿದ್ದೇವೆ. ಎಲ್ಲವೂ ಅಂದುಕೊಂಡಷ್ಟು ವೇಗವಾಗಿ ಹಾಗೂ ನಿರೀಕ್ಷಿತ ಮಟ್ಟದಲ್ಲಿ ಆಗದ ಹಿನ್ನೆಲೆ ನಮಗೆ ಹಿನ್ನಡೆ ಉಂಟಾಗುತ್ತಿದೆ ಎಂದು ವಿವರಿಸಿದರು.
ನಾರಾಯಣಸ್ವಾಮಿ ಮಾತನಾಡಿ, ಕೋಲಾರ ಜಿಲ್ಲೆ ಮೊದಲಿನಿಂದಲೂ ನೀರಿನ ಸಮಸ್ಯೆ ಎದುರಿಸುತ್ತಿದೆ. ಸರ್ಕಾರ ಕೆರೆ ತುಂಬಿಸಲಿದೆ ಎಂದು ಕೇಳಿದಾಗ ತುಂಬಾ ಸಂತೋಷವಾಗಿತ್ತು. ಆದರೆ ಈಗ ಎಲ್ಲ ಕೆರೆಗಳು ತುಂಬದ ಹಿನ್ನೆಲೆ ನಿರಾಸೆ ಉಂಟಾಗಿದೆ. ಇಲ್ಲಿ ಸರ್ಕಾರ ಅಥವಾ ಸಚಿವರನ್ನು ದೂಷಿಸುತ್ತಿಲ್ಲ, ಜಲಮಂಡಳಿ ಅಧಿಕಾರಿಗಳು ಅಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಬೆಂಗಳೂರು ನಗರದಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ನೀರು ಹರಿದು ಹೋಗುತ್ತಿದ್ದು ಅದನ್ನು ಸಂಗ್ರಹಿಸಿ ನಮಗೆ ನೀಡುವ ಕಾರ್ಯ ಇನ್ನಷ್ಟು ಪರಿಣಾಮಕಾರಿಯಾಗಿ ಆಗಬೇಕಿದೆ. ದೇಶಕ್ಕೆ ಚಿನ್ನ ನೀಡಿದ ಜಿಲ್ಲೆ ನಮ್ಮದು. ಇಂದು ಜಿಲ್ಲೆಗೆ ತ್ಯಾಜ್ಯ ನೀರು ಹರಿದುಬರುತ್ತಿದೆ ಎಂಬ ಬೇಸರವಿದ್ದರೂ, ಸಂಸ್ಕರಿಸಿ ಗುಣಮಟ್ಟದ ನೀರು ನೀಡಲಾಗುತ್ತಿದೆ ಎಂಬ ಸಮಾಧಾನ ಹೊಂದಿದ್ದೇವೆ. ಇದೀಗ ಈ ನೀರು ಸಹ ಸಮರ್ಪಕವಾಗಿ ಲಭ್ಯವಾಗುತ್ತಿರುವುದು ಬೇಸರ ತಂದಿದೆ ಎಂದರು.
ಇದನ್ನೂ ಓದಿ .. ದಂತ ವೈದ್ಯನಿಗೆ ಚೂರಿ ಇರಿತ; ಸಾರ್ವಜನಿಕರಿಂದ ದುಷ್ಕರ್ಮಿಗೆ ಥಳಿತ