ಬೆಂಗಳೂರು: ರಾಜ್ಯದಲ್ಲಿ ವ್ಯಾಕ್ಸಿನೇಷನ್ ಗಾಗಿ ಜನರು ಪರದಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ, ಸದ್ಯ 44 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕೊಡಲಾಗುತ್ತಿದೆ. ಆದರೆ, ಎಲ್ಲಾ ಆಸ್ಪತ್ರೆಗಳ ಮುಂದೆ ಕೋವ್ಯಾಕ್ಸಿನ್ ಲಸಿಕೆ ನೋ ಸ್ಟಾಕ್ ಅನ್ನುವ ಬೋರ್ಡ್ ಸರ್ವೇ ಸಾಮಾನ್ಯವಾಗಿಬಿಟ್ಟಿದೆ.
ಓದಿ: 30 ಅಡಿ ಆಳದ ಬಾವಿಗೆ ಬಿದ್ದ ವೃದ್ಧೆಯ ರಕ್ಷಿಸಿದ ಪೊಲೀಸರು.. ವಿಡಿಯೋ
ಈಗ ಸಮಸ್ಯೆ ಆಗಿರೋದು ಬೇರೇನೇ ಇದೆ, ಕೋವ್ಯಾಕ್ಸಿನ್ 2ನೇ ಡೋಸ್ ಗಾಗಿ ಸಾರ್ವಜನಿಕರ ಪರದಾಟ ಸಾಕಷ್ಟು ಕಂಡು ಬರುತ್ತಿದ್ದು, ಸರ್ಕಾರ ಹಾಗೂ ವ್ಯವಸ್ಥೆಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜನರು ಆಸ್ಪತ್ರೆಗಳ ಮುಂದೆ ವ್ಯಾಕ್ಸಿನೇಷನ್ ಗಾಗಿ ನಿಂತಿದ್ದಾರೆ. ಸದ್ಯಕ್ಕೆ ಕೋವಿಶೀಲ್ಡ್ ಲಸಿಕೆ 44 ವರ್ಷ ಮೇಲ್ಪಟ್ಟವರಿಗೆ ಆದೂ 2ನೇ ಡೋಸ್ ಕೊಡಲಾಗುತ್ತಿದೆ. ಆದರೆ ಜನ ದಿನ ಕಾಯುತ್ತಿರುವುದು ಕೋವಿಶೀಲ್ಡ್ 2ನೇ ಡೋಸ್ ಪಡೆಯಲು ಅಲ್ಲ ಬದಲಾಗಿ ಕೋವ್ಯಾಕ್ಸಿನ್ ಮೊದಲನೇ ಡೋಸ್ ಪಡೆದು 55 ದಿನ ಕಳೆದಿದ್ದು, ಈಗ 2ನೇ ಡೋಸ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ.
ನಗರದ ಪ್ರಮುಖ ಆಸ್ಪತ್ರೆಗಳಾದ ಕೆ.ಸಿ ಜನರಲ್, ಬೌರಿಂಗ್, ವಿಕ್ಟೋರಿಯಾ, ಸಿವಿ ರಾಮನ್ ಸೇರಿದಂತೆ ಎಲ್ಲ ಆಸ್ಪತ್ರೆಗಳಲ್ಲಿ ಈಗಾಗಲೆ ಕೋವ್ಯಾಕ್ಸಿನ್ ಖಾಲಿಯಾಗಿ ಆಸ್ಪತ್ರೆಗಳ ಮುಂದೆ ನೋಸ್ಟಾಕ್ ಬೋರ್ಡ್ ರಾರಾಜಿಸುತ್ತಿದೆ. ಕೆ.ಸಿ ಜನರಲ್ ಆಸ್ಪತ್ರೆಯ ಮುಂದೆ ಕೋವ್ಯಾಕ್ಸೀನ್ 2ನೇ ಡೋಸ್ ಪಡೆಯಲು ಜನ ಪರದಾಡುತ್ತಿದ್ದಾರೆ.
ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳನ್ನು ಕೇಳಿ ಕೇಳಿ ಸುಸ್ತಾಗಿ, ಸರ್ಕಾರ - ಅಧಿಕಾರಿಗಳು ಹಾಗೂ ವ್ಯವಸ್ಥೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಕೆ.ಸಿ ಜನರಲ್ ಆಸ್ಪತ್ರೆಯ ಸುಪರಿಂಟೆಂಡೆಂಟ್ ಕೇಳಿದರೆ ನಿತ್ಯ ವ್ಯಾಕ್ಸಿನ್ಗಾಗಿ ಬಿಬಿಎಂಪಿ ವ್ಯಾಪ್ತಿಯ ಯಲ್ಲಮ್ಮ ದಾಸಪ್ಪ ಆಸ್ಪತ್ರೆಗೆ ಬೇಡಿಕೆ ಇಡುತ್ತೇವೆ. ಕೋವಿಶೀಲ್ಡ್ ಲಸಿಕೆ ಮಾತ್ರ ಬರುತ್ತಿದ್ದು, ಆದರೆ ಕಳೆದ 1 ವಾರದಿಂದ ಕೋವ್ಯಾಕ್ಸಿನ್ ಸರಬರಾಜಿನಲ್ಲಿ ವ್ಯತ್ಯಯ ಆಗಿದೆ. ಶನಿವಾರ ಮತ್ತು ಭಾನುವಾರ 200 ಡೋಸ್ ಲಸಿಕೆ ಕೊಟ್ಟಿದ್ದರು. ತದನಂತರ ಸ್ಟಾಕ್ ಬಂದಿಲ್ಲ. ನಾವು ಕೋವ್ಯಾಕ್ಸಿನ್ ಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದು ಕೆ.ಸಿ ಜನರಲ್ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ವೆಂಕಟೇಶಯ್ಯ ಈಟಿವಿ ಭಾರತಕ್ಕೆ ಹೇಳಿದರು.
ಒಟ್ಟಿನಲ್ಲಿ ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದವರು 2ನೇ ಡೋಸ್ ಗಾಗಿ ಆಸ್ಪತ್ರೆಗಳಿಗೆ ಅಲೆದೂ ಅಲೆದೂ ಸುಸ್ತಾಗಿದ್ದಾರೆ. ಅದ್ಯಾವಾಗ ಕೋವ್ಯಾಕ್ಸಿನ್ ಬರುತ್ತೋ ಅಂತ ಕಾಯುತ್ತಿದ್ದಾರೆ. ಇನ್ನಾದರೂ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಇದರ ಬಗ್ಗೆ ಗಮನ ಹರಿಸಿ ಜನರಿಗೆ ಕೋವ್ಯಾಕ್ಸಿನ್ ಲಸಿಕೆ ಸಿಗುವಂತೆ ಕ್ರಮ ಕೈಗೊಳ್ಳಬೇಕಾಗಿದೆ.