ಬೆಂಗಳೂರು : ಕೊರೊನಾ ವೈರಸ್ ಸೋಂಕು ಹರಡುವಿಕೆ ನಿಯಂತ್ರಿಸಲು ’ಆರೋಗ್ಯ ಸೇತು’ ಆ್ಯಪ್ ಸಹಕಾರಿಯಾಗಿದ್ದು, ಇನ್ನೂ ಹೆಚ್ಚು ವ್ಯಾಪಕವಾಗಿ ಇದನ್ನು ಜನರು ಬಳಸುವಂತಾಗಬೇಕು. ಹಾಗಾಗಿ ಈ ಆ್ಯಪ್ ಅನ್ನು ಎಲ್ಲರೂ ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಂಜೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು, ಆರೋಗ್ಯ ಸೇತು ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವವರ ಗೌಪ್ಯತೆ ಬಹಿರಂಗವಾಗುತ್ತದೆ ಎಂದು ಸಂದೇಹ ಪಡುವ ಅಗತ್ಯವಿಲ್ಲ, ಇದು ಪ್ರತಿಯೊಬ್ಬ ನಾಗರಿಕನ ಸುರಕ್ಷಾ ಕವಚವಾಗಿದೆ. ಪ್ರತಿಯೊಬ್ಬ ಸರ್ಕಾರಿ ಸಿಬ್ಬಂದಿ ಇದನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಕಡ್ಡಾಯ. ಇದನ್ನು ಬಳಸದೇ ಕಚೇರಿಗೆ ಬರುವ ಹಾಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಬಳಸಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ಮಾಹಿತಿ ನೀಡುತ್ತದೆ. ಬಳಕೆದಾರರ ಸುರಕ್ಷತಾ ದೃಷ್ಟಿಯಿಂದ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎನ್ನುವ ಮಾಹಿತಿಯನ್ನೂ ಕೂಡ ಈ ಆ್ಯಪ್ ನೀಡುತ್ತದೆ. ಸೋಂಕಿತರು ನಿಕಟದಲ್ಲಿದ್ದರೆ ಬಳಕೆದಾರರನ್ನು ಈ ಆ್ಯಪ್ ಎಚ್ಚರಿಸುತ್ತದೆ. ಕೊರೊನಾ ವೈರಸ್ ಕುರಿತಾದ ಎಲ್ಲಾ ಸಂದೇಹ, ಗೊಂದಲಗಳಿಗೆ ಉತ್ತರವನ್ನು ನೀಡುವ ಈ ಆ್ಯಪ್ ಕೊರೊನಾ ವಿರುದ್ಧದ ಹೋರಾಟದಲ್ಲಿ ಒಂದು ಪರಿಣಾಮಕಾರಿ ಸಾಧನವಾಗಿದೆ. ಆರೋಗ್ಯ ಸೇತು ಆ್ಯಪ್ ಅನ್ನು ದೇಶದಲ್ಲಿ 11 ಕೋಟಿ ಜನ ಡೌನ್ ಲೋಡ್ ಮಾಡಿದ್ದಾರೆ. ಕರ್ನಾಟಕದಲ್ಲಿ 67 ಲಕ್ಷ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಈ ಆ್ಯಪ್ ಇಡೀ ದೇಶವನ್ನ ರಕ್ಷಣೆ ಮಾಡುತ್ತದೆ ಎಂದು ಹೇಳಿದರು.
ಕಚೇರಿಗೆ ಪ್ರವೇಶವಿಲ್ಲ :
ಇನ್ನು ಸರ್ಕಾರಿ ನೌಕರರು, ಅಧಿಕಾರಿಗಳು ಸಹ ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಒಂದು ವೇಳೆ ಈ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳದಿದ್ದರೆ ಅಂತಹ ನೌಕರರು ಹಾಗೂ ಅಧಿಕಾರಿಗಳು ಕಚೇರಿಗೆ ಪ್ರವೇಶಿಸುವಂತಿಲ್ಲ. ಇದನ್ನು ಆಯಾ ಇಲಾಖೆಯ ಹಿರಿಯ ಅಧಿಕಾರಿಗಳು ಗಮನಿಸಬೇಕು ಎಂದು ಸೂಚಿಸಲಾಗಿದೆ. ಹೆಚ್ಚು ಜನರಿಗೆ ಇದು ತಲುಪಿಸುವಂತೆ ನಮ್ಮ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜೊತೆಗೆ ಐಟಿ - ಬಿಟಿ ಸೆಕ್ಟರ್ ಅವರು ಸಹ ಕಡ್ಡಾಯವಾಗಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದರು.
ಈ ಆ್ಯಪ್ನಲ್ಲಿ ನಾಲ್ಕು ಅಂಶಗಳನ್ನು ಗಮನಿಸಬಹುದು. ಯಾರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು, ನೀವು ಯಾವ ಝೋನ್ನಲ್ಲಿದ್ದೀರಾ, ನೀವು ಸುರಕ್ಷಿತ ಪ್ರದೇಶದಲ್ಲಿ ಇದ್ದೀರಾ, ನೀವು ಅಪಾಯಕ್ಕೆ ಸಿಲುಕಿದ್ದೀರಾ ? ಎಂಬುದು ಗೊತ್ತಾಗಲಿದೆ. ವೈದ್ಯರಿಗೆ ಕೇಳಬೇಕಾದ ಪ್ರಶ್ನೆ ಆ್ಯಪ್ ತಿಳಿಸಲಿದೆ. ರಾಜ್ಯದಲ್ಲಿ 2,255 ಆರೆಂಜ್ ಝೋನ್ ನೀಡಲಾಗಿದೆ. ಅವರಲ್ಲಿ 233 ಮಂದಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇದರಲ್ಲಿ 33 ಜನರಿಗೆ ಪಾಸಿಟಿವ್ ಬಂದಿದೆ ಎಂದು ಹೇಳಿದರು.
ಆರೋಗ್ಯ ಸೇತು ಆ್ಯಪ್ನ ಸುರಕ್ಷತೆಯ ಬಗ್ಗೆ ಇರುವ ಗೊಂದಲಗಳಿಗೆ ಉತ್ತರಿಸಿದ ಸಚಿವರು, ಈ ಆ್ಯಪ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಮಹಾರಾಷ್ಟ್ರ, ತಮಿಳುನಾಡು, ಹೈದರಾಬಾದ್ ನಿಂದ ಹೆಚ್ಚು ಕೇಸ್ ಬರುತ್ತಿವೆ. ರಾಜ್ಯಕ್ಕೆ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯದ ಜನ ಆಂತಕ್ಕೊಳಗಾಗುವುದು ಬೇಡ. ರಾಜ್ಯದಲ್ಲಿ ಹೆಚ್ಚಿನ ಸೋಂಕು ಕಂಡು ಬಂದಿಲ್ಲ, ಹೊರಗಿನಿಂದ ಬಂದವರಲ್ಲಿ ಮಾತ್ರ ಕಾಣಿಸಿಕೊಂಡಿದೆ. ಅವರನ್ನು ಕ್ಯಾರಂಟೈನ್ ಮಾಡಲಾಗುತ್ತಿದೆ. ಸಮುದಾಯ ಮಟ್ಟಕ್ಕೆ ಸೋಂಕು ಹೋಗಿಲ್ಲ. ಲಾಕ್ ಡೌನ್ ಈಗಷ್ಟೇ ಸಡಿಲಿಸಿದ್ದೇವೆ. ಈಗಾಗಲೇ ಸೋಂಕಿನ ಹೆಚ್ಚಳದ ಬಗ್ಗೆ ಹೇಳುವುದಕ್ಕೆ ಆಗುವುದಿಲ್ಲ. ನಾಲ್ಕೈದು ದಿನ ಕಳೆದ ನಂತರ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.
21 ದಿನಕ್ಕೆ ಸೋಂಕಿನ ಪ್ರಮಾಣ ಎರಡು ಪಟ್ಟಾಗಿತ್ತು. ಈಗ 11 ದಿನಕ್ಕೆ ರಾಜ್ಯದಲ್ಲಿ ಡಬಲ್ ಆಗುತ್ತಿದೆ. ಮೇ, ಜೂನ್ ಹೊತ್ತಿಗೆ ಪ್ರಕರಣ ಇನ್ನಷ್ಟು ಹೆಚ್ಚಾಗಲಿದೆ. ಹೊರ ರಾಜ್ಯಗಳಿಂದ ಬಂದವರಿಂದಲೇ ಸೋಂಕು ಹೆಚ್ಚಾಗಿದೆ. ಮೇ 30 ರ ಒಳಗೆ ರಾಜ್ಯಾದ್ಯಂತ 60 ಲ್ಯಾಬ್ಗಳನ್ನು ಮಾಡಲಾಗುತ್ತದೆ. ಈಗಾಗಲೇ 53 ಲ್ಯಾಬ್ ಕೆಲಸ ಮಾಡುತ್ತಿದೆ. ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಮಾಡುವುದಕ್ಕೆ ಸಾಧ್ಯವಿಲ್ಲ. ವಿದೇಶದಿಂದ ಸಾಕಷ್ಟು ಮಂದಿ ಬರುತ್ತಿದ್ದಾರೆ ಎಂದು ತಿಳಿಸಿದರು.
ಟಾಸ್ಕ್ ಫೋರ್ಸ್ :
ಕೊರೊನಾ ಸೋಂಕನ್ನು ಗ್ರಾಮೀಣ ಭಾಗದಲ್ಲಿ ಹೇಗೆ ನಿಯಂತ್ರಿಸಬೇಕು ಎಂಬುದನ್ನು ಚರ್ಚಿಸಲಾಗುತ್ತಿದೆ. ಗ್ರಾಮ ಪಂಚಾಯಿತಿಯಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್ ವಾರು ಟಾಸ್ಕ್ ಫೋರ್ಸ್ ರಚನೆ ಮಾಡಲು ಉದ್ದೇಶಿಸಿದ್ದು, ಈ ಬಗ್ಗೆ ಹಂತ ಹಂತವಾಗಿ ರಚನೆ ಮಾಡಲು ನಿರ್ಧರಿಸಿದ್ದೇವೆ. ಈ ಮೂಲಕ ಜನರ ಜೀವನ ಉಳಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.