ಬೆಂಗಳೂರು: ಇಷ್ಟು ವರ್ಷದ ರಾಜಕೀಯ ಅನುಭವದಲ್ಲಿ ಪ್ರಸ್ತಾವನೆಗೂ, ಮಂಜೂರಾತಿಗೂ ವ್ಯತ್ಯಾಸ ಗೊತ್ತಿಲ್ಲ ಎಂದು ಕಾಣುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ವೈದ್ಯಕೀಯ ಶಿಕ್ಷಣ ಸಚಿವ ಸಚಿವ ಡಾ.ಸುಧಾಕರ್ ಟೀಕಿಸಿದ್ದಾರೆ.
ಕೊರೊನಾ ಮಹಾಮಾರಿಯ ಸಂಕಷ್ಟದಲ್ಲಿ ಸತ್ಯಾಂಶವಿಲ್ಲದ ದಾಖಲೆಗಳ ಮೂಲಕ ರಾಜ್ಯದ ಜನರನ್ನು ದಿಕ್ಕು ತಪ್ಪಿಸುವ ನಿಮ್ಮ ಆಧಾರ ರಹಿತ ಆರೋಪಗಳನ್ನು ಯಾರೂ ನಂಬುವುದಿಲ್ಲ. ಜನರಿಗೆ ಸತ್ಯ ಯಾವುದು, ಸುಳ್ಳು ಯಾವುದು ಗೊತ್ತಿದೆ. ಯಾರು ಲೆಕ್ಕ ಕೇಳಿದರೂ ನಮ್ಮ ಬಳಿ ಸರಿಯಾದ ದಾಖಲೆಗಳಿವೆ ಎಂದಿದ್ದಾರೆ.
ಜಗತ್ತಿನಲ್ಲಿ ನಾನೇ ಬಲ್ಲವನೆಂದು, ನಾನೇ ಸತ್ಯವಂತನೆಂದುಕೊಂಡರೆ ಅಂಥವರು ಎಲ್ಲರಿಗಿಂತಲೂ ಕೀಳಾಗುತ್ತಾರೆ. ಸೇವಾ ಕಾರ್ಯದಲ್ಲಿ ಪ್ರೀತಿ, ಕರುಣೆ ಇರಬೇಕೇ ಹೊರತು ಪ್ರತಿಷ್ಠೆ, ಕೀರ್ತಿ ಮತ್ತು ಕಾಮನೆಗಳಲ್ಲ. ಅಸೂಯೆ ಅಧಃಪತನಕ್ಕೆ ನಾಂದಿ. ಸತ್ಯ ಯಾವತ್ತೂ ಧಾನ್ಯವಿದ್ದಂತೆ, ಸುಳ್ಳು ತೌಡಿದ್ದಂತೆ. ಜನರಿಗೆ ಗಟ್ಟಿ, ಜೊಳ್ಳು ಯಾವುದು ಎಂದು ಗೊತ್ತಿದೆ ಎಂದು ಟೀಕಿಸಿದ್ದಾರೆ.
ಇಷ್ಟು ವರ್ಷದ ರಾಜಕೀಯ ಅನುಭವದಲ್ಲಿ ಪ್ರಸ್ತಾವನೆಗೂ ಮಂಜೂರಾತಿಗೂ ವ್ಯತ್ಯಾಸ ಗೊತ್ತಿಲ್ಲ ಎಂದು ಕಾಣುತ್ತದೆ. ಅವರು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 815 ಕೋಟಿ ರೂ. ವೆಚ್ಚದಲ್ಲಿ ಉಪಕರಣ ಖರೀದಿಯಾಗಿದೆ ಎಂದಿದ್ದಾರೆ. ಆದರೆ ಖರ್ಚು ಕೇವಲ 33 ಕೋಟಿ ರೂ ಅಷ್ಟು. ಪ್ರಸ್ತಾವನೆ ಖರ್ಚಿನ ಲೆಕ್ಕ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದ್ದಾರೆ.