ದೊಡ್ಡಬಳ್ಳಾಪುರ(ಬೆಂ.ಗ್ರಾಮಾಂತರ ಜಿಲ್ಲೆ): ಕಲಬೆರಕೆ ಆಹಾರ ಸೇವನೆಯಿಂದ ಮನುಷ್ಯ ಇವತ್ತು ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾನೆ. ಮಾರುಕಟ್ಟೆಯಲ್ಲಿ ಪರಿಶುದ್ಧ ಅಡುಗೆ ಎಣ್ಣೆ ಸಿಗುವುದು ಅಸಾಧ್ಯದ ಮಾತು. ಗಾಣದಿಂದ ಎಣ್ಣೆ ತೆಗೆಯುವ ಉದ್ಯಮ ಕಣ್ಮರೆಯಾದ ನಂತರ ಜನರಿಗೆ ಸಿಗುವ ಎಣ್ಣೆ ಕಲಬೆರಕೆಯಿಂದ ಕೂಡಿದ ಎಣ್ಣೆಯೇ ಆಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇಹಳ್ಳಿಯ ಮೆಕ್ಯಾನಿಕಲ್ ಇಂಜಿನಿಯರ್ ಅನಿಲ್, ಉತ್ತಮ ಆರೋಗ್ಯಕ್ಕಾಗಿ ಪರಿಶುದ್ಧವಾದ ಎಣ್ಣೆಗಾಗಿ ಮಾರುಕಟ್ಟೆಯಲ್ಲಿ ಹುಡುಕಾಟ ನಡೆಸಿದ್ದರು. ಆದ್ರೆ ಅಂತಹ ಎಣ್ಣೆ ಸಿಗದಿದ್ದಾಗ ಗಾಣದ ಎಣ್ಣೆ ತಯಾರಿಕೆಯ ಉದ್ಯಮ ಆರಂಭಿಸಿ ಸೈ ಎನಿಸಿಕೊಂಡಿದ್ದಾರೆ.
ಇವರಿಗೆ ದೊಡ್ಡಬಳ್ಳಾಪುರ ಸುತ್ತಮುತ್ತ ಪರಿಶುದ್ಧ ಆಡುಗೆ ಸಿಗಲಿಲ್ಲ, ಇದೇ ಹುಡುಕಾಟದಲ್ಲಿರುವಾಗ ಸ್ವಂತ ಉದ್ಯಮ ಆರಂಭಿಸುವ ಆಲೋಚನೆ ಬರುತ್ತೆ ಗಾಣಿಗ ಸಮುದಾಯದ ಅನಿಲ್‌ಗೆ. ಯಾಕೆ ತಮ್ಮ ಮೂಲ ಕಸುಬನ್ನು ಮುಂದುವರೆಸಬಾರದು ಎಂಬ ಯೋಚನೆ ಬಂದು 5 ಲಕ್ಷ ರೂಪಾಯಿಗಳ ಬಂಡವಾಳದಲ್ಲಿ ಮರದ ಗಾಣದಿಂದ ಪರಿಶುದ್ಧವಾದ ಕಡಲೆಕಾಯಿ ಎಣ್ಣೆ ತಯಾರಿಸುವ ಉದ್ಯಮಕ್ಕೆ ಕೈ ಹಾಕಿದ್ದಾರೆ.
ಸಹಜವಾಗಿ ಗಾಣದಿಂದ ಎಣ್ಣೆ ತಯಾರಿಸುವುದು ಲಾಭದಾಯಕವಲ್ಲ. ಆದರೆ ಜನರ ಆರೋಗ್ಯದ ದೃಷ್ಟಿಯಿಂದ ಮರದ ಗಾಣದಿಂದ ಎಣ್ಣೆ ತಯಾರಿಸುತ್ತಾರೆ. ಒಂದು ಕೆಜಿ ಕಡಲೆಕಾಯಿ ಎಣ್ಣೆ ತೆಗೆಯಲು 2 ಕೆಜಿ 400 ಗ್ರಾಂ ಕಡಲೆಕಾಯಿ ಬೇಕು. ಪಾವಗಡದ ಮಿಲ್‌ನಲ್ಲಿ ಕೆಜಿ ಕಡಲೆ ಬೀಜಕ್ಕೆ 90 ರೂ. ಕೊಟ್ಟು ಖರೀದಿಸುತ್ತಾರೆ. ಇದರಿಂದ ಒಂದು ಕೆಜಿ ಕಡಲೆಕಾಯಿ ಎಣ್ಣೆ ತಯಾರಿಸಲು 240 ರೂಪಾಯಿ ಖರ್ಚಾಗುತ್ತೆ. ಆದರೆ ಮಾರುವುದು ಮಾತ್ರ 250 ರೂಪಾಯಿಗೆ ಮಾತ್ರ. ಇದರ ಜೊತೆಗೆ ಗಾಣದಿಂದ ತೆಗೆದ ಕಡಲೆಕಾಯಿ ಹಿಂಡಿಗೆ ಬೇಡಿಕೆ ಇರುವುದರಿಂದ ಹಿಂಡಿ ಮಾರಾಟದಿಂದ ಬರುವ ಹಣ ಲಾಭವಾಗಿರುತ್ತೆ. ಲಾಭಕ್ಕಿಂತ ಜನರಿಗೆ ಪರಿಶುದ್ಧವಾದ ಆಡುಗೆ ಎಣ್ಣೆ ಕೊಟ್ಟ ಖುಷಿ ಸಿಕ್ಕಿದೆ ಎನ್ನುತ್ತಾರೆ ಅನಿಲ್.
ಹಾಲು ಕರೆಯುವ ಹಸುಗಳಿಗೆ ಗಾಣದಿಂದ ತೆಗೆದ ಹಿಂಡಿ ಒಳ್ಳೆಯ ಆಹಾರ. ಮಾರುಕಟ್ಟೆಯಲ್ಲಿ ಸಿಗುವ ಹಿಂಡಿಗಿಂತ ಪರಿಶುದ್ಧವಾಗಿರುತ್ತೆ. ಹೈನುಗಾರಿಕೆ ಮಾಡುವರು ಅನಿಲ್ ಅವರಿಂದ ಹಿಂಡಿಯನ್ನ ಖರೀದಿಸುತ್ತಾರೆ. ಗಾಣದ ಹಿಂಡಿ ಹಾಕುವುದರಿಂದ ಹಸುವಿನ ಹಾಲಿನ ಗುಣಮಟ್ಟ ಹೆಚ್ಚಾಗುತ್ತೆ. 3.5 ಡಿಗ್ರಿಗಿಂತ ಹೆಚ್ಚಿನ ಗುಣಮಟ್ಟದ ಹಾಲು ಹಸು ಕೊಡುತ್ತೆ, ಪ್ರತಿ ಡಿಗ್ರಿ ಹೆಚ್ಚಳಕ್ಕೂ ಒಂದು ರೂಪಾಯಿ ಹೆಚ್ಚುವರಿ ಕೂಡುತ್ತಾರೆ. ಇದರಿಂದ ಹಿಂಡಿ ಬಳಕೆಯಿಂದ ಹೈನುಗಾರಿಕೆ ಸಹ ಲಾಭದಾಯಕವಾಗಿದೆ.