ಬೆಂಗಳೂರು: ಬಿಬಿಎಂಪಿ ಹಾಗೂ ಬಿ-ರೆಸ್ಪಾನ್ಸಿಬಲ್ ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ ಜುಲೈ 15ರಿಂದ ಆಗಸ್ಟ್ 15ರವರೆಗೆ ಇ-ತ್ಯಾಜ್ಯ ಸಂಗ್ರಹ (ನಿರುಪಯುಕ್ತ ಎಲೆಕ್ಟ್ರಾನಿಕ್ ಉಪಕರಣಗಳು) ಅಭಿಯಾನಕ್ಕೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಮತ್ತು ಉಪಮೇಯರ್ ಭದ್ರೇಗೌಡ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಮಾತನಾಡಿದ ಉಪ ಮೇಯರ್ ಭದ್ರೇಗೌಡ, ನಗರದಲ್ಲಿ ಇ-ತ್ಯಾಜ್ಯ ವಿಲೇವಾರಿ ಮಾಡಲು ತುಂಬಾ ಗೊಂದಲಗಳಿದ್ದವು. ಇದೀಗ ಬಿಬಿಎಂಪಿಯು ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ ನಿರುಪಯುಕ್ತ ಎಲೆಕ್ಟ್ರಾನಿಕ್ ಉಪಕರಣಗಳಾದ ಮೊಬೈಲ್, ಟಿವಿ, ವಾಷಿಂಗ್ ಮಿಷನ್, ಕಂಪ್ಯೂಟರ್, ಐರನ್ ಬಾಕ್ಸ್ ಸೇರಿದಂತೆ ಇತರ ಸಾಮಗ್ರಿಗಳನ್ನು ಇ-ತ್ಯಾಜದ ಮೂಲಕ ವೈಜ್ಞಾನಿಕ ವಿಲೇವಾರಿಗೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಮನೆ, ಕಚೇರಿಗಳಲ್ಲಿ ಬಳಕೆಯಾಗದ ಇ-ತ್ಯಾಜ್ಯವನ್ನು ಸಂಗ್ರಹಿಸಿಟ್ಟುಕೊಳ್ಳುವ ಬದಲಿಗೆ ಪಾಲಿಕೆಗೆ ನೀಡಿದರೆ, ವೈಜ್ಞಾನಿಕವಾಗಿ ಸಂಸ್ಕರಿಸಲಾಗುವುದು. ಅದಕ್ಕಾಗಿಯೇ ಒಂದು ತಿಂಗಳ (ಜು.15-ಆಗಸ್ಟ್ 15) ಅಭಿಯಾನ ಹಮ್ಮಿಕೊಂಡಿದ್ದೇವೆ. ಪಾಲಿಕೆಯ ಕೇಂದ್ರ ಕಚೇರಿ ಮತ್ತು ಎಂಟು ವಲಯ ಕಚೇರಿಗಳ ಆವರಣದಲ್ಲಿ ಇ-ತ್ಯಾಜ್ಯ ಸಂಗ್ರಹಿಸುವ ಬಿನ್ಗಳನ್ನು ಅಳವಡಿಸಲಿದ್ದೇವೆ. ನಿರುಪಯುಕ್ತ ಎಲೆಕ್ಟ್ರಾನಿಕ್ ಉಪಕರಣಗಳನ್ನು ಅಲ್ಲಿ ತಂದು ಹಾಕಬಹುದು ಎಂದು ತಿಳಿಸಿದರು.
ಆರಂಭದಲ್ಲಿ ಎಂಟು ವಲಯಗಳಲ್ಲಿ ಬಿನ್ಗಳನ್ನು ಅಳವಡಿಸಲಿದ್ದೇವೆ. ಬಳಿಕ ಹಂತ ಹಂತವಾಗಿ 198 ವಾರ್ಡ್ಗಳಲ್ಲೂ ಬಿನ್ಗಳನ್ನು ಅಳವಡಿಸುತ್ತೇವೆ. ಈ ಅಭಿಯಾನದಲ್ಲಿ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಅವರ ಜೊತೆಗೆ ಸಾರ್ವಜನಿಕರೂ ಕೈ ಜೋಡಿಸಬಹುದು. ಸಾರ್ವಜನಿಕರು ಕೈ ಜೋಡಿಸಿದರೆ ಮಾತ್ರ ಅಭಿಯಾನ ಯಶಸ್ವಿಯಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.