ಬೆಂಗಳೂರು: ರಾಜ್ಯ ಸರ್ಕಾರದ ಕಡ್ಡಾಯ ವರ್ಗಾವಣೆಗೆ ಹೆದರಿ ಕೋಮಾಗೆ ಜಾರಿ ಮೃತಪಟ್ಟಿದ್ದ ಹುಬ್ಬಳ್ಳಿಯ ಆನಂದ ನಗರದ ಶಿಕ್ಷಕ ಸುಭಾಷ್ ತರಲಘಟ್ಟ ಅವರ ನಿಧನಕ್ಕೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ಸಂತಾಪ ಸೂಚಿಸಿದ್ದಾರೆ.
ಶಿಕ್ಷಕರಾರು ವರ್ಗಾವಣೆಗೆ ಎದೆಗುಂದದೆ ಧೈರ್ಯದಿಂದಿರಬೇಕು. ಮುಂದಿನ ವರ್ಗಾವಣೆ ಸಮಯದಲ್ಲಿ ಶಿಕ್ಷಕ ಸ್ನೇಹಿ, ಸರಳ ವರ್ಗಾವಣೆ ಪ್ರಕ್ರಿಯೆ ರೂಪಿಸಲಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಕರಡು ಮಸೂದೆ ರಚನೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಕಡ್ಡಾಯ ವರ್ಗಾವಣೆ ಎಂಬ ಪ್ರಕ್ರಿಯೆಯನ್ನೇ ಮುಂದಿನ ಬಾರಿಗೆ ಸ್ಥಗಿತಗೊಳಿಸಲಾಗುವುದು. ಶಿಕ್ಷಕರು ಆತಂಕಕ್ಕೆ ಒಳಗಾಗಬಾರದು. ತಮ್ಮ ವೃತ್ತಿಯನ್ನು ಪ್ರತಿ ಶಿಕ್ಷಕರೂ ಅರಿತು ಕೆಲಸ ಮಾಡಿದಲ್ಲಿ ನಿಜಾರ್ಥದಲ್ಲಿ ಸಮಾಜ ಸೇವೆ ಸಲ್ಲಿಸಲು ಸಾಧ್ಯ ಎಂದಿದ್ದಾರೆ.