ಯಲಹಂಕ: ಸ್ಮಶಾನಕ್ಕೆ ಸಂಪರ್ಕಿಸುವ ರಸ್ತೆಯ ಒತ್ತುವರಿ ತೆರವು ಕಾರ್ಯಾಚರಣೆಗೆ ತೆರಳಿದ ತಹಶೀಲ್ದಾರ್ ಮೇಲೆ ವ್ಯಕ್ತಿಯೋರ್ವ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಸ್ಥಳದಲ್ಲಿಯೇ ಇದ್ದ ಗ್ರಾಮಸ್ಥರು ಹಲ್ಲೆಗೆ ಯತ್ನಿಸಿದ ವ್ಯಕ್ತಿಗೆ ಗೂಸಾ ನೀಡಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಯಲಹಂಕದ ಬುಡುಮನಹಳ್ಳಿಯಲ್ಲಿ ಘಟನೆ ನಡೆದಿದ್ದು, ಬಿ.ಆರ್ ಚಿಕ್ಕಣ್ಣ ಎನ್ನುವ ವ್ಯಕ್ತಿ ತನ್ನ ಜಮೀನು ಪಕ್ಕದಲ್ಲಿಯೇ ಇದ್ದ ಸ್ಮಶಾನಕ್ಕೆ ಸಂಪರ್ಕಿಸುವ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದ. ಇದರಿಂದ ಗ್ರಾಮಸ್ಥರು ಒಂದು ಕಿ.ಮೀ ಇದ್ದ ಸ್ಮಶಾನಕ್ಕೆ 6 ಕಿ.ಮೀ ಸುತ್ತಿ ಬಳಸಿ ಬರಬೇಕಿತ್ತು. ಇದಕ್ಕೆ ಸಂಬಂಧಪಟ್ಪಂತೆ ಕಂದಾಯ ಇಲಾಖೆಯ ಸಿಬ್ಬಂದಿ ಮೂರು ಬಾರಿ ತೆರವು ಮಾಡಲು ಬಂದಿದ್ದರು. ಈ ವೇಳೆ, ಚಿಕ್ಕಣ್ಣ ಮತ್ತು ಆತನ ಮಕ್ಕಳು ಸಿಂಬ್ಬದಿ ವಿರುದ್ಧ ಅವಾಚ್ಯ ಮಾತುಗಳಿಂದು ಬೈದು ತೆರವು ಮಾಡಲು ಅವಕಾಶ ನೀಡದೇ ವಾಪಸ್ ಕಳುಹಿಸಿದರು.
ಕೊನೆಗೆ ಯಲಹಂಕ ತಹಶೀಲ್ದಾರ್ ರಘುಮೂರ್ತಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲು ಸ್ಥಳಕ್ಕೆ ಬಂದಾಗ, ತಹಶೀಲ್ದಾರ್ ರಘುಮೂರ್ತಿ ಮೇಲೆ ಚಿಕ್ಕಣ್ಣ ಕೋಲಿನಿಂದ ಹಲ್ಲೆಗೆ ಯತ್ನಿಸಿದ. ಸ್ಥಳದಲ್ಲಿಯೇ ಇದ್ದ ಗ್ರಾಮಸ್ಥರು ಚಿಕ್ಕಣ್ಣ ಮತ್ತು ಆತನ ಮಕ್ಕಳಿಗೆ ಸರಿಯಾಗಿಯೇ ಗೂಸಾ ನೀಡಿದ್ದಾರೆ.
ಘಟನೆಯಿಂದ ತಾಳ್ಮೆ ಕಳೆದುಕೊಳ್ಳದ ತಹಶೀಲ್ದಾರ್ ರಘುಮೂರ್ತಿ ಹಲ್ಲೆಗೆ ಯತ್ನಿಸಿದ ಕುಟುಂಬದ ಸದಸ್ಯರಿಗೆ ಮನವೊಲಿಸಿ ರಸ್ತೆ ಬಿಡಿಸಿದರು. ಒತ್ತುವರಿ ಕಾರ್ಯಾಚರಣೆಗೆ ಜನರ ಸಹಕಾರ ಅತ್ಯವಶ್ಯಕ, ರಸ್ತೆ ಬೇಕೋ ಬೇಡವೋ ನೀವೇ ಯೋಚನೆ ಮಾಡಿ, ನಾನು ಇವತ್ತು ಇಲ್ಲಿ, ನಾಳೆ ಬೇರೆಡೆ ಹೋಗುತ್ತೇನೆ. ಈ ರಸ್ತೆಯಲ್ಲಿ ನಾನೇನು ಓಡಾಡಲ್ಲ, ನೀವೇ ಒಡಾಡುವುದು. ನಿಮ್ಮ ಅನುಕೂಲಕ್ಕೆ ರಸ್ತೆ ಮಾಡಿಸುವುದಾಗಿ ಹೇಳಿ ಒತ್ತುವರಿದಾರನ ಮನವೊಲಿಸಿ ರಸ್ತೆ ತೆರವು ಮಾಡಿಸಿದರು.