ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾನವೀಯತೆ ಮರೆತು ಕಾರಿನ ಬ್ಯಾನೆಟ್ ಮೇಲೆ ವ್ಯಕ್ತಿಯನ್ನು ಶರವೇಗದಲ್ಲಿ ಹೊತ್ತೊಯ್ದಿರುವ ಕಿರಾತಕರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶಂಕರ ಮಠ ರಸ್ತೆಯ ಬಂಕ್ ಬಳಿಯೊಂದರಲ್ಲಿ ಡೀಸೆಲ್ ಹಾಕಿಸಲು ಶಂಕರೇಗೌಡ ಎಂಬುವವರು ನಿಂತಿದ್ದರು. ಈ ವೇಳೆ ಹಿಂದಿನಿಂದ ಬಂದ ಸ್ವಿಫ್ಟ್ ಕಾರ್ನಲ್ಲಿದ್ದವರು ಒಂದೇ ಸಮನೆ ಹಾರ್ನ್ ಮಾಡಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಬಂಕ್ ಸಿಬ್ಬಂದಿ ಕಾರು ತೆಗೆಯುತ್ತಾರೆ, ಹಾರ್ನ್ ಮಾಡಬೇಡಿ ಎಂದಿದ್ದಾರೆ. ಹಾಗೆ ಶಂಕರೇಗೌಡರೂ ಒಂದು ನಿಮಿಷ ಕಾರು ತೆಗೆಯುತ್ತೇನೆ ಎಂದಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಮೂವರು ಶಂಕರೇಗೌಡ ಅವರ ಮುಖಕ್ಕೆ ಗುದ್ದಿ ಹಲ್ಲೆ, ನಡೆಸಿದ್ದಾರೆ.
ಈ ವೇಳೆ, ಕಾರಿನ ಬ್ಯಾನೆಟ್ ಮೇಲೆ ಶಂಕರೇಗೌಡ ಬಿದ್ದಿದ್ದು, ವ್ಯಕ್ತಿ ಕಾರ್ ಬ್ಯಾನೆಟ್ ಮೇಲಿದ್ದರೂ ಶರವೇಗದಲ್ಲಿ ಆರೋಪಿಗಳು ಕಾರು ಚಾಲನೆ ಮಾಡಿದ್ದಾರೆ. ಈ ದೃಶ್ಯ ಏರಿಯಾವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯ ನೋಡಿದ ಸ್ಥಳೀಯರು ಯಾವುದೋ ಸಿನಿಮಾದ ಚಿತ್ರೀಕರಣ ಇರಬೇಕೆಂದು ಭಾವಿಸಿದ್ದಾರೆ.
ಇದೇ ವೇಳೆ, ಶಂಕರೇಗೌಡ ಕಿರುಚಿದ ಕಾರಣ ಸ್ಥಳೀಯರು ಕಾರನ್ನ ನಿಲ್ಲಿಸಿದ್ದಾರೆ. ಆದರೆ ಆರೋಪಿಗಳು ಎಸ್ಕೇಪ್ ಆಗಿದ್ದು, ಸದ್ಯ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.