ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತಾ ಲೋಪ ಉಂಟಾದ ವಿಚಾರವಾಗಿ ಬಿಜೆಪಿಯವರು ಪಂಜಾಬ್ ಸರ್ಕಾರದ ಮೇಲೆ ಗೂಬೆ ಕೂರಿಸೋಕೆ ಹೊರಟಿದ್ದಾರೆ ಎಂದು ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಜಂಟಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ್ ರ್‍ಯಾಲಿಗೆ ತಡೆ ವಿಚಾರವಾಗಿ ಬಿತ್ತರವಾಗುತ್ತಿರುವ ಸುದ್ದಿ ಹಾಗೂ ಬಿಜೆಪಿ ನಾಯಕರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ನೀಡಲಾಗುತ್ತಿದೆ. ಸರ್ಕಾರದವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ವಕ್ತಾರರು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ ಎಂದರು.
'ಸರ್ಕಾರ ಕೆಳಗಿಳಿಸೋ ಪ್ರಯತ್ನ'
ದೇಶದಲ್ಲೇ ಪ್ರಥಮ ದಲಿತ ಮುಖ್ಯಮಂತ್ರಿ ಇರೋದು ಪಂಜಾಬ್ನಲ್ಲಿ. ಸಿಎಂ ಚರಂಜಿತ್ ಸಿಂಗ್ ಚನ್ನಿ ಸರಳ ಸ್ವಭಾವದವರು. ಅಂತಹ ವ್ಯಕ್ತಿ ಮೇಲೆ ಆರೋಪ ಮಾಡುತ್ತಿದ್ದಾರೆ. ಸರ್ಕಾರ ಕೆಳಗಿಳಿಸೋಕೆ ಬಿಜೆಪಿಯವರು ಈ ರೀತಿ ಮಾಡ್ತಿದ್ದಾರೆ.
ಭದ್ರತಾ ವೈಫಲ್ಯ ಆಗಿರೋದು ಕೇಂದ್ರದಿಂದ. ಐಬಿ, ಇಂಟೆಲಿಜೆನ್ಸ್, ಭದ್ರತಾ ಪಡೆ ಪರಿಶೀಲನೆ ಮಾಡುತ್ತೆ. ನಾಲ್ಕು ಸ್ಥಾನಗಳಲ್ಲಿ ಅವರು ಲ್ಯಾಂಡ್ ಆಗಬೇಕು. ಪ್ರತಿ ನಿಮಿಷದ ಮಾಹಿತಿ ಅವರಿಗಿರುತ್ತದೆ. ಅದಾಗ್ಯೂ ಭದ್ರತಾ ವೈಫಲ್ಯ ಅಂದರೆ ಹೇಗೆ? ಇಲ್ಲಿ ಯಾರದ್ದು ತಪ್ಪಾಗಿದೆ. ಅವರ ಅಪೇಕ್ಷೆಯಂತೆ ರ್‍ಯಾಲಿಗೆ ಜನ ಸೇರಿಲ್ಲ. ಅವರು ರ್‍ಯಾಲಿ ಹೈಲೈಟ್ ಮಾಡಬೇಕಿತ್ತು. ಆದರೆ ಅಂತಹ ಸನ್ನಿವೇಶ ಆಗಲಿಲ್ಲ. 70 ಸಾವಿರ ಜನ ಸೇರುತ್ತಾರೆಂಬ ನಿರೀಕ್ಷೆ ಅವರಿಗಿತ್ತು. ಆದರೆ ಅಲ್ಲಿ ಸೇರಿದ್ದು ಕೇವಲ 700 ಜನರು ಮಾತ್ರ. ಪೊಲೀಸರೇ ನಾಲ್ಕೈದು ಸಾವಿರ ಜನ ಇದ್ದರು. ಹೀಗಾಗಿ ಅವರೇ ರ್‍ಯಾಲಿ ರದ್ದು ಮಾಡಿದ್ದು. ಅದಕ್ಕೆ ಕಾರಣ ಬೇಕಲ್ವೇ? ಅದಕ್ಕೆ ಭದ್ರತಾ ಲೋಪ ವಿಚಾರ ಹಿಡಿದಿದ್ದಾರೆ ಎಂದು ಹೇಳಿದರು.
ಹವಾಮಾನ ಚೆನ್ನಾಗಿಲ್ಲವೆಂಬುದು ಗೊತ್ತಿದೆ. ಅಧಿಕಾರಿಗಳೇ ಮಾಹಿತಿ ಒದಗಿಸಿದ್ದಾರೆ. ರೈತರು ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ, ತಪ್ಪಿಸಿಕೊಳ್ಳೋಕೆ ಸೆಕ್ಯೂರಿಟಿ ಲ್ಯಾಪ್ಸ್ ವಿಷಯ ತೋರಿಸುತ್ತಿದ್ದಾರೆ ಎಂದರು.
'ಮೋದಿಯವರಿಗೆ 10 ಪಟ್ಟು ಹೆಚ್ಚು ಭದ್ರತೆ ಇದೆ'
ನೆಹರು, ಇಂದಿರಾ, ರಾಜೀವ್ಗೆ ಕೂಡ ಇಷ್ಟು ಸೆಕ್ಯೂರಿಟಿ ಇರಲಿಲ್ಲ. ಈಗ ಮೋದಿಯವರಿಗೆ 10 ಪಟ್ಟು ಹೆಚ್ಚು ಸೆಕ್ಯೂರಿಟಿ ಇದೆ. ಉತ್ತಮ ಉಪಕರಣಗಳು ಲಭ್ಯವಿವೆ. ಆದರೂ ಪಂಜಾಬ್ ಸಿಎಂ ಮೇಲೆ ಆರೋಪ ಮಾಡುತ್ತಿದ್ದಾರೆ. ಪ್ರಧಾನಿ ಬರುವುದಾದರೆ 10 ಬಾರಿ ಚೆಕ್ ಮಾಡುತ್ತಾರೆ. ಆದರೂ ಹೇಗೆ ಸೆಕ್ಯೂರಿಟಿ ಫೆಲ್ಯೂರ್ ಆಗುತ್ತೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮೋದಿಗೆ ಭದ್ರತಾ ಲೋಪ: ನಾಳೆ ಸುಪ್ರೀಂನಲ್ಲಿ ಸಿಜೆಐ ನೇತೃತ್ವದ ಪೀಠದಿಂದ ಕೇಸ್ ವಿಚಾರಣೆ
ಪ್ರಧಾನಿಗೆ ಭದ್ರತಾ ವೈಫಲ್ಯ ಆಗಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪಂಜಾಬ್ ಮುಖ್ಯಮಂತ್ರಿ ಹೇಳಿದ್ದು, ಹೈಕೋರ್ಟ್ನಲ್ಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿದ್ದಾರೆ. ಮೂರು ದಿನದಲ್ಲಿ ವರದಿ ಕೊಡುತ್ತಾರೆ. ಇದನ್ನು ಪಂಜಾಬ್ ಸಿಎಂ ನನ್ನ ಜೊತೆ ಹೇಳಿದ್ದಾರೆ. ನಾನು ಅವರ ಜೊತೆ ಬೆಳಗ್ಗೆ ಮಾತನಾಡಿದ್ದೇನೆ.ಇದಕ್ಕಿಂತ ಇನ್ನೇನು ಬೇಕು? ಎಂದು ಸ್ಪಷ್ಟನೆ ಕೊಟ್ಟರು.
'ಎಮೋಷನಲ್ ಪಾಲಿಟಿಕ್ಸ್ ಬೇಡ'
ನಾನು ನನ್ನ ಕಚೇರಿಗೆ ಹೋಗುವಾಗಲೂ ಮೋದಿ ಬರುತ್ತಿದ್ದಾರೆ ಅಂದ್ರೆ ತಡೆಯುತ್ತಾರೆ. ನಾನು ಗಲಾಟೆ ಮಾಡಿದ ಬಳಿಕ ಬಿಟ್ಟಿದ್ದಾರೆ. ಇದು ನನಗೆ ಆದ ಅನುಭವ. ರಾಜಕೀಯ ಲಾಭಕ್ಕೆ ಎಮೋಷನಲ್ ಪಾಲಿಟಿಕ್ಸ್ ಮಾಡುವುದು ಬೇಡ ಎಂದರು.