ಬೆಂಗಳೂರು: ಜುಲೈ 5 ರಿಂದ ರಾಜ್ಯದಲ್ಲಿ ಜಾರಿಗೆ ಬರಲಿರುವ ಅನ್‌ಲಾಕ್ 3.Oನಲ್ಲಿ ಮಾಲ್‌ಗಳ ಆರಂಭಕ್ಕೆ ಅನುಮತಿ ನೀಡುವ ಕುರಿತು ಸದ್ಯದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಮಾಲ್ ಅಸೋಸಿಯೇಷನ್ ನಿಯೋಗಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾಗೆ ಮಾಲ್ ಅಸೋಸಿಯೇಷನ್ ನಿಯೋಗದ ಸದಸ್ಯರು ಭೇಟಿ ನೀಡಿ ರಾಜ್ಯದಲ್ಲಿ ಮಾಲ್‌ಗಳನ್ನು ತೆರೆಯಲು ಅನುಮತಿ ಕೋರಿ ಮನವಿ ಸಲ್ಲಿಸಿದರು. ಈಗಾಗಲೇ ರಾಜ್ಯದಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭಗೊಂಡಿದ್ದು, ಮಾಲ್‌ಗಳ ಹೊರತುಪಡಿಸಿ ಇತರ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅನುಮತಿಸಲಾಗಿದೆ. ಅದೇ ರೀತಿ ಮಾಲ್‌ಗಳನ್ನು ತೆರೆಯಲು ಷರತ್ತುಬದ್ದ ಅನುಮತಿ ನೀಡಬೇಕು, ಅನ್ ಲಾಕ್ 3.Oನಲ್ಲಿ ಕಾರ್ಯಾರಂಭಕ್ಕೆ ಅನುಮತಿಸುವ ಪಟ್ಟಿಯಲ್ಲಿ ಮಾಲ್‌ಗಳನ್ನೂ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಈ ಮನವಿ ಸ್ವೀಕರಿಸಿದ ಸಿಎಂ ಯಡಿಯೂರಪ್ಪ ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಕೋವಿಡ್ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಇನ್ನೆರಡು ಮೂರು ದಿನದಲ್ಲಿ ಮತ್ತೆ ನಿಮ್ಮನ್ನ ಕರೆಸಿ ಈ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಲಸಿಕೆ ಕೊರತೆ ಬಗ್ಗೆ ಕೇಂದ್ರ ಸಚಿವರೊಂದಿಗೆ ಮಾತನಾಡುತ್ತೇನೆ: ಸಚಿವ ಡಾ.ಕೆ.ಸುಧಾಕರ್
ಸಿಎಂ ಭೇಟಿ ಬಳಿಕ ಮಾತನಾಡಿದ ಗರುಡಾ ಮಾಲ್ ಸಿಇಒ ನಂದೀಶ್, ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಪ್ರತಿ ಮಾಲ್ ಗಳಿಗೆ ಲಾಕ್‌ಡೌನ್‌ನಿಂದ 2-3 ಕೋಟಿ ನಷ್ಟ ಆಗಿದೆ. ಒಟ್ಟು 84 ಮಾಲ್‌ಗಳು ರಾಜ್ಯದಲ್ಲಿವೆ. ಮೂರು ಲಕ್ಷ ಸಿಬ್ಬಂದಿಗೆ ಕಷ್ಟ ಆಗಿದೆ. ಹಾಗಾಗಿ ಮಾಲ್‌ಗಳ ಆರಂಭಕ್ಕೆ ಮನವಿ ಮಾಡಿದ್ದು, ಕೋವಿಡ್ ನಿಯಮಗಳನ್ನು ಪಾಲನೆ ಮಾಡಲು ಬದ್ಧರಿದ್ದೇವೆ ಎಂದು ತಿಳಿಸಿದ್ದೇವೆ. ಇದರ ಜತೆಗೆ ಮಾಲ್‌ಗಳ ಬಾಡಿಗೆ, ವಿದ್ಯುತ್ ಫಿಕ್ಸೆಡ್ ಚಾರ್ಜ್ ಮನ್ನಾ ಮಾಡಲು ಕೋರಿದ್ದೇವೆ ಎಂದರು.
ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಮಾಲ್ ತೆರೆಯಲು ಅನುಮತಿ ಕೇಳಿದ್ದೇವೆ. ಜುಲೈ 5 ರಿಂದ ಅನುಮತಿ ಕೊಡುವಂತೆ ಸಿಎಂಗೆ ಕೇಳಿದ್ದೇವೆ. ಎರಡು ಮೂರು ದಿವಸ ಟೈಂ ಕೊಡಿ ಮತ್ತೆ ಕರೆಸಿ ಮಾತನಾಡುತ್ತೇನೆ ಎಂದು ಹೇಳಿ ಕಳುಹಿಸಿದ್ದಾರೆ. ಸಿಎಂ ಮೇಲೆ ನಮಗೆ ನಂಬಿಕೆ ಇದೆ. ಈ ಬಾರಿಯ ಅನ್‌ಲಾಕ್‌ನಲ್ಲಿ ನಮಗೆ ಅವಕಾಶ ಸಿಗುವ ವಿಶ್ವಾಸ ಇದೆ ಎಂದು ಹೇಳಿದರು.