ಬೆಂಗಳೂರು: ಮೇಕೆದಾಟು ಯೋಜನೆ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬರೆದ ಪತ್ರಕ್ಕೆ ತಮಿಳುನಾಡು ಮುಖ್ಯಮಂತ್ರಿಗಳು ಸ್ಪಂದಿಸಬೇಕು. ಈ ಯೋಜನೆಯಿಂದ ಎರಡೂ ರಾಜ್ಯಗಳಿಗೆ ಅನುಕೂಲವಾಗಲಿದೆ ಎನ್ನುವುದನ್ನು ತಿಳಿಯಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಯಿಂದ ಇಬ್ಬರಿಗೂ ಅನುಕೂಲ ಇದೆ. ನಮಗೆ ಕುಡಿಯುವ ನೀರು ಸಿಗುತ್ತದೆ. ಮಳೆ ಕಡಿಮೆಯಾದಾಗ ಅವರ ಪಾಲಿನ ನೀರನ್ನ ಕೊಡಲು ಸಾಧ್ಯವಾಗುತ್ತದೆ. ಎರಡೂ ರಾಜ್ಯಕ್ಕೆ ಅನುಕೂಲ ಆಗುತ್ತದೆ ಎಂದೂ ಗೊತ್ತಿದ್ದರೂ ಕೂಡ ಅವರು ಸುಪ್ರೀಂ ಕೋರ್ಟ್ನಲ್ಲಿ ಆಕ್ಷೇಪಣೆ ಸಲ್ಲಿಸಿದ್ದಾರೆ. ಆದರೂ ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದರು.
ಮೇಕೆದಾಟು ನಮ್ಮ ವ್ಯಾಪ್ತಿಯಲ್ಲಿ ಮಾಡುತ್ತಿದ್ದೇವೆ. ಅವರ ಪಾಲಿನ ನೀರಿಗೆ ಯಾವುದೇ ತೊಂದರೆಯಾಗಲ್ಲ. ಆದರೂ ಅವರು ಸುಪ್ರೀಂಕೋರ್ಟ್ಗೆ ಹೋಗಿದ್ದಾರೆ. ಮಾರ್ಕಂಡೇಯ ಜಲಾಶಯ ವಿಷಯವಾಗಿ ಮೊದಲಿನಿಂದಲೂ ತಗಾದೆ ತೆಗೆಯುತ್ತಿದ್ದಾರೆ. ಇದೆಲ್ಲ ರಾಜಕೀಯ ಕಾರಣಕ್ಕಾಗಿ ಮಾಡುತ್ತಿದ್ದಾರೆ. ಹೊಸ ಸರ್ಕಾರ ಬಂದಿದೆ. ಸಣ್ಣ ವಿಚಾರ ದೊಡ್ಡದು ಮಾಡುತ್ತಿದ್ದಾರೆ ಎಂದರು.
ಡಿ.ಕೆ. ಶಿವಕುಮಾರ್ 17 ಶಾಸಕರಿಗೆ ಆಹ್ವಾನ ನೀಡಿದ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಆದರೂ ಇದರಿಂದ ಅವರಿಗೆ ಈಗಿರುವ ಶಕ್ತಿ ಸಾಲದು ಎನ್ನುವುದು ಗೊತ್ತಾಗುತ್ತದೆ. ಹೀಗಾಗಿ ಹೊರಗಿನಿಂದ ನಾಯಕರನ್ನು ಕರೆತರಬೇಕು ಎನ್ನುವುದು ಡಿ.ಕೆ. ಶಿವಕುಮಾರ್ ಉದ್ದೇಶವಾಗಿದೆ ಎಂದರು.
15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬರಬೇಕಿರುವ ಹಣವನ್ನು ಪಡೆಯುವ ಕುರಿತು ರಾಜ್ಯದಿಂದ ಒತ್ತಡ ಹಾಕಲಾಗಿದೆ. ಅದನ್ನು ನಾವು ಪಡೆದುಕೊಳ್ಳುತ್ತೇವೆ. ಇನ್ನು ಪೆಟ್ರೋಲ್ ಮೇಲಿನ ಸೆಸ್ ಕಡಿಮೆ ಮಾಡುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಜವಬ್ದಾರಿ ಎರಡೂ ಕಡೆ ಇದೆ. ಇದು ಇಡೀ ದೇಶದ ವಿಚಾರ. ಸಾಮಾನ್ಯ ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಎಲ್ಲರೂ ಒಗ್ಗಟ್ಟಾಗಿ ಹೋಗಬೇಕಿದೆ ಎಂದರು.
ಇದನ್ನೂ ಓದಿ: ಮೇಕೆದಾಟು ಯೋಜನೆ : ತಮಿಳುನಾಡು ಸಿಎಂಗೆ ಪತ್ರ ಬರೆದ ಸಿಎಂ ಬಿಎಸ್ವೈ