ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ತಡರಾತ್ರಿ ಭೀಕರ ಅಪಘಾತ ನಡೆದಿದ್ದು, ಏಳು ಮಂದಿ ಸಾವನ್ನಪ್ಪಿದ್ದಾರೆ. ವೇಗವಾಗಿ ಕಾರು ಚಲಾಯಿಸುವಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಗುದ್ದಿದ ಪರಿಣಾಮ ಸ್ಥಳದಲ್ಲೇ ಏಳು ಮಂದಿ ಕೊನೆಯುಸಿರೆಳೆದಿದ್ದಾರೆ. ಕೋರಮಂಗಲದ ಮಂಗಳ ಕಲ್ಯಾಣಮಂಟಪದ ಬಳಿ ಸೋಮವಾರ ರಾತ್ರಿ ಸುಮಾರು 1.30 ವೇಳೆ ಈ ದುರ್ಘಟನೆ ನಡೆದಿದೆ.
ತಮಿಳುನಾಡು ಶಾಸಕರ ಪುತ್ರ, ಭಾವಿ ಸೊಸೆ ಬಲಿ
ಅಪಘಾತದಲ್ಲಿ ಕೃಷ್ಣಗಿರಿ ಜಿಲ್ಲೆಯ ಡೆಂಕಣಿಕೋಟೆ ವಿಧಾನಸಭಾ ಕ್ಷೇತ್ರದ ಡಿಎಂಕೆ ಶಾಸಕ ಪ್ರಕಾಶ್ ಪುತ್ರ ಕರುಣಾಸಾಗರ್, ಭಾವಿ ಸೊಸೆ ಬಿಂದು, ಕೇರಳ ಮೂಲದ ಅಕ್ಷಯ್ ಗೋಯಲ್, ಹರಿಯಾಣ ಮೂಲದ ಉತ್ಸವ್, ಹುಬ್ಬಳ್ಳಿಯ ರೋಹಿತ್ ಹಾಗು ಡಾ.ಧನುಶಾ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮೃತಪಟ್ಟ ಕೆಲವರು ಕೋರಮಂಗಲ ಪಿಜಿಯೊಂದರಲ್ಲಿ ವಾಸವಾಗಿದ್ದರು. ಮೃತಪಟ್ಟವರೆಲ್ಲ ಸ್ನೇಹಿತರಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ತಡರಾತ್ರಿ ತಮಿಳುನಾಡಿನಿಂದ ನಗರಕ್ಕೆ ಬರುತ್ತಿದ್ದ ಕೆಎ 03 ಎಂವೈ 6666 ನೋಂದಣಿಯ ಆಡಿ ಕಾರು ಕೋರಮಂಗಲ ಬಳಿ ಬರುವಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಎಡಭಾಗದ ಎರಡು ಟೈರ್ಗಳು ಜಖಂ ಆಗಿವೆ. ಕಾರಿನ ಬಾನೆಟ್‌ಗೆ ಸಂಪೂರ್ಣ ಹಾನಿಯಾಗಿದೆ. ಕಾರಿನ ಮುಂಭಾಗದಲ್ಲಿ ಮೂವರು, ಹಿಂಭಾಗದಲ್ಲಿ ನಾಲ್ವರು ಸೇರಿದಂತೆ ಒಟ್ಟು ಏಳು ಮಂದಿ ಜೀವ ಬಿಟ್ಟಿದ್ದಾರೆ. ಕಾರಿನ ಒಳಗೆಲ್ಲಾ ಬರೀ ರಕ್ತದ ಕಲೆಗಳೇ ಅಂಟಿಕೊಂಡಿವೆ.
ಟ್ರಾಫಿಕ್ ಕಮೀಷನರ್ ಡಾ.ಬಿ.ಆರ್.ರವಿಕಾಂತೇಗೌಡ ಹೇಳಿಕೆ
ಘಟನೆ ಸಂಬಂಧ ಸ್ಥಳಕ್ಕೆ ದೌಡಾಯಿಸಿದ ಟ್ರಾಫಿಕ್ ಕಮೀಷನರ್ ಡಾ.ಬಿ.ಆರ್.ರವಿಕಾಂತೇಗೌಡ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಚಾಲಕನ ನಿರ್ಲಕ್ಷ್ಯಕ್ಕೆ ಈ ಘಟನೆ ನಡೆದಿದೆ. ಕಾರಿನಲ್ಲಿದ್ದವರು ಯಾರೂ ಸಹ ಕಾರ್ ಸಿಟ್ ಬೆಲ್ಟ್ ಹಾಕಿರಲಿಲ್ಲ. ಅಪಘಾತವಾದ ಕಾರಿನಲ್ಲಿ ಏರ್ ಬ್ಯಾಗ್ ಓಪನ್ ಆಗಿಲ್ಲ. ಈ ಘಟನೆಯಿಂದ ಸ್ಥಳದಲ್ಲೇ 6 ಜನ ಮೃತಪಟ್ಟಿದ್ದಾರೆ. ಒಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕಾರಿನಲ್ಲಿ ಒಟ್ಟು 7 ಜನ ಪ್ರಯಾಣ ಮಾಡುತ್ತಿದ್ದರು. ಮೂವರು ಕಾರಿನ ಮುಂಭಾಗ ಕುಳಿತರೆ ನಾಲ್ವರು ಹಿಂಬದಿ ಕುಳಿತಿದ್ದರು. ಮೃತರ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಅವರು ಯಾಕೆ ರಾತ್ರಿ ಹೊರಬಂದಿದ್ದರು? ಎಲ್ಲಿಗೆ ಹೋಗಿದ್ದರು ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದೇವೆ' ಎಂದಿದ್ದಾರೆ.
ಡಿಎಂಕೆ ಶಾಸಕ ಪ್ರಕಾಶ್ ಪುತ್ರ ಕರುಣಸಾಗರ್
ಮೃತ ಕರುಣಸಾಗರ್ ತಂದೆ ಪ್ರಕಾಶ್ ಕೃಷ್ಣಗಿರಿ ಜಿಲ್ಲೆಯ ಡೆಂಕಣಕೋಟೆ ಕ್ಷೇತ್ರದ ಡಿಎಂಕೆ ಶಾಸಕರಾಗಿದ್ದಾರೆ. ಜೊತೆಗೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಗುರುತಿಸಿಕೊಂಡಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸಂಜೀವಿನಿ ಬ್ಲೂ ಮೆಟಲ್ಸ್ ಎಂಬ ಎಂಸ್ಯಾಂಡ್ ಕಂಪನಿಯಲ್ಲಿ ಪಾಲುದಾರಿಕೆ ಹೊಂದಿದ್ದಾರೆ.
ಸದ್ಯ ಅಪಘಾತವಾಗಿರುವ ಕಾರು ಬ್ಲೂ ಮೆಟಲ್ ಕಂಪನಿಯ ರಿಜಿಸ್ಟ್ರೇಷನ್ನಲ್ಲಿದೆ. ನಿನ್ನೆ ಸಂಜೆ ಕರುಣಾಸಾಗರ್ ಕಟ್ಟಡದ ಸಾಮಗ್ರಿ ಖರೀದಿಗೆ ಬೆಂಗಳೂರಿಗೆ ಬಂದಿದ್ದ. ರಾತ್ರಿ ಫ್ರೆಂಡ್ಸ್ ಜೊತೆ ಕಾರಿನಲ್ಲಿ ಹೋಗುವಾಗ ಅಪಘಾತ ನಡೆದಿದೆ ಎನ್ನಲಾಗುತ್ತಿದೆ.
ತಮಿಳುನಾಡಿನ ಕೃಷ್ಣಗಿರಿ ಮೂಲದ ಕಂಪನಿ ಹೆಸರಿನಲ್ಲಿ ನೋಂದಣಿಯಾಗಿರುವ ಕಾರು ಇದಾಗಿದ್ದು, 2015ರ ನವೆಂಬರ್ನಲ್ಲಿ ಬೆಂಗಳೂರಿನಲ್ಲಿ ಈ ಕಾರು ಖರೀದಿಸಲಾಗಿತ್ತು. ಬೆಂಗಳೂರು ಪೂರ್ವ ಆರ್.ಟಿ.ಓ ಕಚೇರಿಯಲ್ಲಿ ಕಾರು ರಿಜಿಸ್ಟ್ರೇಷನ್ ಆಗಿತ್ತು. ಅಪಘಾತವಾದ ಕಾರನ್ನು ಸದ್ಯ ಸಂಜೀವಿನಿ ಬ್ಲೂ ಮೆಟಲ್ಸ್ ಕಂಪನಿಯವರೇ ಬಳಸ್ತಿದ್ದಾರಾ ಅಥವಾ ಬೇರೆಯವರಿಗೆ ಮಾರಾಟ ಮಾಡಿದ್ದಾರಾ ಎಂಬುದರ ಬಗ್ಗೆ ತನಿಖೆ ನಡೆಯಬೇಕಿದೆ.
ಇದನ್ನೂ ಓದಿ: ಬೆಂಗಳೂರು ಭೀಕರ ಕಾರು ಅಪಘಾತದ ಸಿಸಿಟಿವಿ ದೃಶ್ಯ