ಮಹದೇವಪುರ(ಬೆಂಗಳೂರು): ನಗರದ ಸಂಚಾರ ದಟ್ಟಣೆ ನಿವಾರಣೆಗೆ ರೂಪಿಸಲಾಗಿರುವ ಫೆರಿಪೆರಲ್ ವರ್ತುಲ ರಸ್ತೆ ನಿರ್ಮಾಣ ಯೋಜನೆ ಸುಮಾರು ಹದಿನೇಳು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಇದರಿಂದ ಬೆಂಗಳೂರು ಪೂರ್ವ ತಾಲೂಕಿನ ಮಹದೇವಪುರ ಕ್ಷೇತ್ರದ ರೈತರು ನೂರಾರು ಎಕ್ಟೇರ್ ಕೃಷಿ ಭೂಮಿಯನ್ನು ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದಾರೆ.
2004-05 ರಲ್ಲಿ ರೂಪಿಸಿದ ಯೋಜನೆಯು ಹಣಕಾಸು ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯ, ಆಡಳಿತ ಸರ್ಕಾರಗಳ ಬದಲಾವಣೆ ಸೇರಿದಂತೆ ನಾನಾ ಕಾರಣಗಳಿಂದ ದಶಕಗಳ ಕಾಲ ನೆನೆಗುದಿಗೆ ಬಿದ್ದಿದೆ.
ಬಿಡಿಎ ಪಿಆರ್ಆರ್ ಯೋಜನೆಗೆ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ರೈತರಿಗೆ ಯಾವುದೇ ಪರಿಹಾರ ನೀಡದೆ ಪಹಣಿಯಲ್ಲಿ (ಆರ್ಟಿಸಿಯಲ್ಲಿ ಎಂಟ್ರಿ) ನಮೂದಿಸಲಾಗಿದೆ. ಇದರಿಂದ ರೈತರು ಪಿತ್ರಾರ್ಜಿತ ಆಸ್ತಿಯಲ್ಲಿ ಪಾವತಿ ಖಾತೆ, ವಿಭಾಗ ಖಾತೆ, ಮತ್ತು ರಸ್ತೆ ಅಭಿವೃದ್ಧಿಗೆ ಗುರುತಿಸಿದ ಭೂಮಿಯನ್ನು ಬಿಟ್ಟು ಉಳಿದ ಬೇರೆ ಯಾವುದೇ ಆ ಭಾಗದ ಜಮೀನನ್ನು ಮಾರಾಟ ಮಾಡಲು ಸಾಧ್ಯವಾಗದೆ, ಮನೆ ಕಟ್ಟಲು ಆಗದೆ, ಜಮೀನನ್ನು ಮಾರಾಟ ಮಾಡಿ ಮಕ್ಕಳಿಗೆ ಮದುವೆ ಮಾಡಲು ಸಾಧ್ಯವಾಗದೆ ರೈತರು ಕಣ್ಣೀರಲ್ಲಿ ಕೈ ತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೃಷಿಗೆ ಕೈ ಹಾಕದ ರೈತರು:
ಬಿಡಿಎ, ರಸ್ತೆಗೆ ಭೂಮಿಯನ್ನು ಯಾವುದೇ ಸಮಯದಲ್ಲಿ ಸ್ವಾಧೀನಪಡಿಸಿಕೊಳ್ಳಲಿದೆ ಎಂಬ ಆತಂಕದಲ್ಲಿ ರೈತರು ಬೇಸಾಯಕ್ಕೆ ಬಂಡವಾಳ ಹಾಕಿ ಬೆಳೆ ಬೆಳೆಯಲು ಹಿಂಜರಿಯುತ್ತಿದ್ದಾರೆ. ಫಲವತ್ತಾದ ಭೂಮಿ ಇದ್ದರೂ ಕೃಷಿಯಲ್ಲಿ ತೊಡಗದೆ ಕೈಗಾರಿಕೆಗಳತ್ತ ಮುಖಮಾಡಿ ಕೂಲಿ ಕಾರ್ಮಿಕರಾಗಿದ್ದಾರೆ.
ಈ ಯೋಜನೆಯ ನೀಲನಕ್ಷೆಯೂ ತುಮಕೂರು ರಸ್ತೆಯ ನೈಸ್ ಜಂಕ್ಷನ್‌ನಿಂದ ಆರಂಭಗೊಂಡು ಬಳ್ಳಾರಿ ರಸ್ತೆ, ಹೊಸಕೋಟೆ ರಸ್ತೆ, ಸರ್ಜಾಪುರ ರಸ್ತೆ ಮಾರ್ಗವಾಗಿ ಹೊಸೂರು ರಸ್ತೆ ಬಳಿ ಅಂತ್ಯಗೊಳ್ಳಲಿದೆ. ಒಟ್ಟು 67 ಕಿ.ಮೀ. ಉದ್ದದ ರಸ್ತೆಗೆ 1,989 ಎಕರೆ ಭೂಮಿಯನ್ನು ಬಿಡಿಎ ಸ್ವಾಧೀನಪಡಿಸಿಕೊಳ್ಳಲಿದೆ.
ಜಿ.ಪಂ ಮಾಜಿ ಸದಸ್ಯರ ಪ್ರತಿಕ್ರಿಯೆ:
ಈ ಬಗ್ಗೆ ಭೂಮಿ ಕಳೆದುಕೊಂಡಿರುವ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಣೇಶ್ ಮಾತನಾಡಿ, ಬೆಂಗಳೂರು ಅಭಿವೃದ್ಧಿ ಪಡಿಸುವ ದೃಷ್ಟಿಯಲ್ಲಿ ರೈತರ ಜಮೀನನ್ನು ಸ್ವಾಧೀನಪಡಿಸಿಕೊಂಡು ಎಕರೆಗೆ ಎರಡರಷ್ಟು, ಮೂರರಷ್ಟು ಹಣ ಕೊಡುತ್ತೇವೆ ಎಂದು ಆಶ್ವಾಸನೆ ನೀಡಿ ದಶಕಗಳೇ ಕಳೆದರೂ ಕಾಮಗಾರಿ ಆರಂಭ ಮಾಡಿಲ್ಲ. ರೈತರಿಗೆ ಪರಿಹಾರವೂ ನೀಡದೆ ಏಕಾಏಕಿ ಪಹಣಿಯಲ್ಲಿ ಎಂಟ್ರಿ ಮಾಡಿದೆ. ಮಹದೇವಪುರ ಕ್ಷೇತ್ರ ವ್ಯಾಪ್ತಿಯ ರಾಂಪುರ, ಬಿದರಹಳ್ಳಿ, ಹಿರಂಡಹಳ್ಳಿ, ಆದೂರು, ಬೈರತಿ, ಆವಲಹಳ್ಳಿ, ದೊಡ್ಡಬನಹಳ್ಳಿ ಸೇರಿದಂತೆ ನೂರಾರು ರೈತರಿಗೆ ಭೂಮಿ ಇಲ್ಲದೇ, ಇತ್ತ ಪರಿಹಾರವೂ ಇಲ್ಲದೇ ಬಿಡಿಎ ಕಚೇರಿಗಳಿಗೆ ಸುತ್ತಾಡುತ್ತಿದ್ದು ಬಿಡಿಎಗೆ ರೈತರೆಲ್ಲರೂ ಹಿಡಿಶಾಪ ಹಾಕುತ್ತಿದ್ದಾರೆ ಎಂದರು.
ಹಿರಂಡಳ್ಳಿ ನಿವಾಸಿ ರಾಮ್ ಮೂರ್ತಿ ಮಾತನಾಡಿ, 17 ವರ್ಷದಿಂದ ಬಿಡಿಎ ಪಿ.ಆರ್.ಆರ್ ಯೋಜನೆಗೆ ಹೆಲಿಕಾಪ್ಟರ್ ಮೂಲಕ ಡಿಜಿಟಲ್ ಸರ್ವೇ ಸೇರಿದಂತೆ ಈವರೆಗೂ ಮೂರು ಬಾರಿ ಸರ್ವೇ ಮಾಡಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದೆಯೇ ಹೊರತು ಕಾಮಗಾರಿಗೆ ಚಾಲನೆ ನೀಡಿಲ್ಲ. ಬಿಡಿಎಯ ಈ ಯೋಜನೆಯಿಂದ ಸಾಕಷ್ಟು ಮಂದಿ ರೈತರು ಖಾತೆಗಳನ್ನು ಬದಲಾವಣೆ ಮಾಡಿಕೊಳ್ಳಲು, ಕಂದಾಯ ಇಲಾಖೆಯು ಬಿಡಿಎ ವತಿಯಿಂದ ಎನ್ ಒ ಸಿ ಕೇಳುತ್ತಿದೆ. ಆದರೆ ಎನ್ ಒ ಸಿ ನೀಡದೆ ರೈತರನ್ನು ವರ್ಷಾನುಗಟ್ಟಲೆ ಕಚೇರಿಗಳಿಗೆ ಅಲೆದಾಡಿಸುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಪಿ.ಆರ್.ಆರ್ ಯೋಜನೆ ಬರುತ್ತದೆ ಎಂದು ತಿಳಿದ ನಂತರ ಹಿರಂಡಹಳ್ಳಿ ಸುತ್ತಮುತ್ತಲು ಬೇಸಾಯ ಮಾಡುತ್ತಿದ್ದವರು ಬೇರೆ ಕೆಲಸ ಹುಡಿಕಿಕೊಂಡಿದ್ದಾರೆ. ಇದೀಗ ಕೃಷಿ ಭೂಮಿ ಪಾಳು ಬಿದ್ದು ಗಿಡಗಂಟುಗಳು ಬೆಳೆದು ಕಾಡುಗಳಾಗಿ ಮಾರ್ಪಟ್ಟಿದೆ ಎಂದು ಅಸಮಾಧಾನ ಹೊರಹಾಕಿದರು.
ಬಿಡಿಎ ಅಧ್ಯಕ್ಷರು ಏನಂತಾರೆ?
ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಅವರನ್ನು ಸಂಪರ್ಕಿಸಿದಾಗ ಫೆರಿಪೆರಲ್ ರಸ್ತೆ ಯೋಜನೆಯನ್ನು ಶೀಘ್ರವಾಗಿ ಚಾಲನೆ ನೀಡಲು ಹಣಕಾಸು ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಫೆರಿಪೆರಲ್ ವರ್ತುಲ ರಸ್ತೆ ಅಭಿವೃದ್ಧಿ ಮಾಡಲು ಈಗಾಗಲೇ ಮೂರು ಸಂಸ್ಥೆಗಳು ಆಸಕ್ತಿ ತೋರಿವೆ, ಕ್ಯಾಬಿನೆಟ್ ಅನುಮೋದನೆ ಸಿಕ್ಕ ಕೂಡಲೇ ಟೆಂಡರ್ ಕರೆಯಲಾಗುವುದು ಎಂದು ತಿಳಿದರು.
ಇದನ್ನೂ ಓದಿ: ಕಿತ್ತೂರಿನಲ್ಲಿ ರಾಣಿ ಚೆನ್ನಮ್ಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ: ಸಚಿವ ನಿರಾಣಿ