ಮಹದೇವಪುರ: ಥೈಲ್ಯಾಂಡ್ನ ಕಾಂಬೋಡಿಯಾದಲ್ಲಿ ನಡೆದ ವಿಶ್ವ ಮೊಹೆತ್ ಕಿಕ್ ಬಾಕ್ಸಿಂಗ್ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ಕ್ರಿಡಾಪಟುಗಳಿಗೆ ತವರಿನಲ್ಲಿ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು.
ಚಿನ್ನದ ಪದಕ ಗೆದ್ದ ಕ್ರೀಡಾಪಟು ಪುನೀತ್ ರೆಡ್ಡಿ ಮತ್ತು ಬೆಳ್ಳಿ ಪದಕ ವಿಜೇತ ಚೇತನ್ ಗೌಡ ಅವರನ್ನು ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಹದೇವಪುರದ ಮಾರತಹಳ್ಳಿಯ ಮುನೇಕೊಳ್ಳಾಳವರೆಗೂ ರೋಡ್ ಶೋ ಮೂಲಕ ಪಟಾಕಿ ಸಿಡಿಸಿ ಕೇಕ್ ಕತ್ತರಿಸಿ ಸಂಭ್ರಮದಿಂದ ಭರ್ಜರಿಯಾಗಿ ಸ್ವಾಗತಿಸಲಾಯಿತು.
ಎರಡು ವರ್ಷಗಳಿಂದ ಪಟ್ಟ ಕಠಿಣ ಪರಿಶ್ರಮದಿಂದ ಗೆಲುವು ಸಾಧ್ಯವಾಗಿದೆ. 2015 ರಲ್ಲೇ ಸ್ಪರ್ಧೆಗೆ ತೆರಳಬೇಕಾಗಿತ್ತು, ಆದರೆ ಆಗಿರಲಿಲ್ಲ. ಸದ್ಯ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದು ದೇಶದ ಹಿರಿಮೆ ಹೆಚ್ಚಿಸಲು ಅವಕಾಶ ಸಿಕ್ಕಿತು ಎಂದು ವಿಜೇತ ಕ್ರೀಡಾಪಟುಗಳು ಸಂತಸ ಹಂಚಿಕೊಂಡರು.
40 ರಾಷ್ಟ್ರಗಳಿಂದ 140 ಸ್ಪರ್ಧಿಗಳು ಭಾಗವಹಿಸಿದ್ದು, ಭಾರತದಿಂದ 6 ಜನರ ಪೈಕಿ ಕರ್ನಾಟಕದಿಂದ ಇಬ್ಬರು ಆಯ್ಕೆಯಾಗಿದ್ದರು.