ಬೆಂಗಳೂರು: ಮುಖ್ಯಮಂತ್ರಿಗಳ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದಿದ್ದೇನೆಯೇ ಹೊರತು ಬೇರೆ ಏನೂ ಇಲ್ಲ. ಹೆಚ್.ವಿಶ್ವನಾಥ್ ಹತಾಶರಾಗಿ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.
ಸಿಎಂ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಮುಖ್ಯಮಂತ್ರಿಗಳ ವಿರುದ್ಧವಾಗಿ ಮಾತಾಡಿದ್ದರು. ಅದಕ್ಕೆ ಹಗುರವಾಗಿ ಮಾತಾಡಬೇಡಿ ಎಂದು ನಾವು ಮಾತಾಡಿದ್ದೆವು ಅಷ್ಟೇ. ಅವರ ಆಡಿಯೋ, ವಿಡಿಯೋ ನನ್ನ ಬಳಿ ಇದೆ. ಅದರಲ್ಲೇ ಅವರ ನಾಲಿಗೆ, ಸಂಸ್ಕೃತಿ ಹೇಗಿದೆ ಅಂತಾ ಗೊತ್ತಾಗುತ್ತೆ. ವಿಶ್ವನಾಥ್ ವಯಸ್ಸಿನಲ್ಲಿ ಹಿರಿಯರು. ಆದರೂ ಅವರ ಬಾಯಲ್ಲಿ ಬರುವ ಆ ರೀತಿಯ ಶಬ್ದ ಮಾತ್ರ ಅಸಂಬದ್ಧ. ಅವರ ಬಗ್ಗೆ ಮಾತಾಡಿದ್ರೆ, ನನ್ನ ನಾಲಿಗೆಯೇ ಹೊಲಸಾಗುತ್ತದೆ ಎಂದು ತಿರುಗೇಟು ನೀಡಿದರು.
ಸಿಎಂ ಪುತ್ರ ವಿಜಯೇಂದ್ರ ಮೇಲೆ ಕಿಕ್ ಬ್ಯಾಕ್ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಟೆಂಡರ್ ಪಾರದರ್ಶಕವಾಗಿದೆ. ಎಲ್ಲಾ ವಿವರವೂ ವೆಬ್ಸೈಟ್ನಲ್ಲಿ ಸಿಗುತ್ತದೆ. ವಿಶ್ವನಾಥ್ ಹತಾಶೆಯಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.
ನರ್ಸ್ ಜಯಲಕ್ಷ್ಮಿ ಕಥೆ ಬಗ್ಗೆ ಗೊತ್ತಾ ಎಂಬ ವಿಶ್ವನಾಥ್ ಹೇಳಿಕೆ ವಿಚಾರ ಕುರಿತ ಪ್ರಶ್ನೆಗೆ ಮಾಧ್ಯಮ ಪ್ರತಿನಿಧಿಗಳ ಮೇಲೆ ಗರಂ ಆದ ರೇಣುಕಾಚಾರ್ಯ, ಅದು ವೈಯಕ್ತಿಕ ವಿಷಯ. ಆ ಬಗ್ಗೆ ಮಾತಾಡಬೇಡಿ ಎಂದು ಸಿಡಿಮಿಡಿಗೊಂಡು ನಿರ್ಗಮಿಸಿದರು.
ಇದನ್ನೂ ಓದಿ: 'ಎಲ್ಲ ಇಲಾಖೆಯಲ್ಲೂ ವಿಜಯೇಂದ್ರ ಹಸ್ತಕ್ಷೇಪವಿದೆ, ಯಾವ ಮಂತ್ರಿಯೂ ಸಮಾಧಾನವಾಗಿಲ್ಲ'