ಬೆಂಗಳೂರು: ಲಾಕ್ಡೌನ್ನಿಂದ ದೇಶದಲ್ಲಿ ಬಹಳಷ್ಟು ವಲಸೆ ಕಾರ್ಮಿಕರು ನಗರಗಳಿಂದ ತಮ್ಮ ಸ್ವಂತ ಊರುಗಳಿಗೆ ತೆರಳುತ್ತಿದ್ದಾರೆ. ಆದರೆ ಇದರಲ್ಲಿ ಬಹುಪಾಲು ಜನರ ಕಷ್ಟವೆಂದರೆ, ಸ್ವಂತ ಊರಿನಲ್ಲಿ ದುಡಿಮೆ ಮಾಡಲು ಮಾರ್ಗವಿಲ್ಲ, ಬೆಂಗಳೂರಿನಂತ ದೊಡ್ಡ ನಗರಗಳಲ್ಲಿ ಕೆಲಸ ಸಿಗುತ್ತಿಲ್ಲ ಅನ್ನೋದು.
ಕೊರೊನಾ ಸೋಂಕು ಇಡೀ ದೇಶವನ್ನೇ ಆಕ್ರಮಿಸಿದ್ದು, ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಈಟಿವಿ ಭಾರತ್ ಭೇಟಿ ನೀಡಿದಾಗ ಬಿಹಾರ ಮೂಲದ ಕಾರ್ಮಿಕ ರಾಕೇಶ್ ಲಾಕ್ಡೌನ್ನಿಂದ ಕೆಲಸದ ಮೇಲಾದ ಪರಿಣಾಮದ ಬಗ್ಗೆ ನೋವಿನ ಮಾತುಗಳನ್ನಾಡಿದರು. ಊರಿಗೆ ಹೋದರೆ ದುಡಿಮೆ ಇಲ್ಲವೆಂದು ಇಲ್ಲಿಗೆ ಬಂದಿದ್ದೆ. ಆದರೆ ಬಂದ 10ನೇ ದಿನಕ್ಕೆ ಲಾಕ್ ಡೌನ್ ಘೋಷಣೆ ಆಯ್ತು ಎಂಬ ಆತಂಕ ವ್ಯಕ್ತಪಡಿಸಿದರು. ಸದ್ಯ ಇವರು ಮಧ್ಯಮ ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದು, ಇನ್ನು ಕೆಲ ದಿನಗಳಲ್ಲಿ ಯಾವುದೇ ಹೊಸ ಆರ್ಡರ್ ಬರದೆ ಇದ್ದಲ್ಲಿ ಕಾರ್ಖಾನೆಗಳು ಬಾಗಿಲು ಮುಚ್ಚಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ರೀತಿಯಾದರೆ ಇನ್ನಷ್ಟು ಬ್ಲೂ ಕಾಲರ್ಗಳು (ಕಾರ್ಖಾನೆ ಕೆಲಸಗಾರರು) ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದರು.
ಸರ್ಕಾರದ ಬಳಿ ಮಾಹಿತಿ ಕೊರತೆ: ವಲಸೆ ಕಾರ್ಮಿಕರ ಡೇಟಾ (ಮಾಹಿತಿ) ಕೊರತೆ ಸರ್ಕಾರಕ್ಕಿದ್ದು, ಯಾವುದೇ ಸಚಿವಾಲಯ ಅಥವಾ ಇಲಾಖೆಯ ಬಳಿಯೂ ನಿಖರ ಮಾಹಿತಿ ಇಲ್ಲ. ಒಂದು ವೇಳೆ ಸರ್ಕಾರದ ಬಳಿ ಮಾಹಿತಿ ಇದ್ದಿದ್ದರೆ ಸರ್ಕಾರದ ಪರಿಹಾರಗಳು ಪರಿಣಾಮಕಾರಿಯಾಗಿ ತಲುಪುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಕೊರೊನಾ ಮಹಾಮಾರಿಯಿಂದ ಕಲಿತ ಪಾಠ ಎಂದು ಅಜಿಂ ಪ್ರೇಂಜಿ ವಿಶ್ವವಿದ್ಯಾಲಯದ ಪ್ರೊಫೆಸರ್ ಅಮಿತ್ ಬಸೂಳೆ ಹೇಳಿದರು.