ಬೆಂಗಳೂರು: ಸರ್ಕಾರದ ಹೊಸ ನಿಯಮದಿಂದಾಗಿ ಸಾವಿರಾರು ಖಾಸಗಿ ಹೊಸ ಶಾಲೆಗಳ ಪ್ರಾರಂಭಕ್ಕೆ ಕಂಟಕ ಎದುರಾಗಿದೆ ಎಂದು ರೂಪ್ಸಾ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಇಲಾಖೆ ಕಳೆದ ವರ್ಷದಿಂದ ಖಾಸಗಿ ಹೊಸ ಶಾಲೆಗಳ ಪ್ರಾರಂಭ ಹಾಗೂ ಹಳೆಯ ಶಾಲೆಗಳ ಉನ್ನತೀಕರಣಕ್ಕೆ ಕಠಿಣ ನಿಯಮಗಳನ್ನು ವಿಧಿಸಿ ಸಾವಿರಾರು ಶಾಲೆಗಳ ಪ್ರಾರಂಭಿಸುವ ಉದ್ದೇಶವನ್ನು ಮೊಟಕುಗೊಳಿಸುತ್ತಿದೆ.
ಒಂದೇ ಶಾಲೆಗೆ ಅನುಮತಿ:
ಅಗ್ನಿ ಅವಘಡ ಸುರಕ್ಷೆ ಹಾಗೂ ಕಟ್ಟಡ ಸುರಕ್ಷೆಯ ಇಲಾಖಾ ಅನುಮತಿ ಕಡ್ಡಾಯಗೊಳಿಸಿದ್ದರ ಪರಿಣಾಮ ಸಂಬಂಧಿಸಿದ ಇಲಾಖೆಗಳಲ್ಲಿ ಲಂಚದ ಬೇಡಿಕೆ ಹೆಚ್ಚಾಗಿದೆ ಎಂದು ಲೋಕೇಶ್ ತಾಳಿಕಟ್ಟೆ ಆರೋಪಿಸಿದ್ದಾರೆ.
ಹೊಸ ಶಾಲೆಗಾಗಿ ಅರ್ಜಿ ಸಲ್ಲಿಸುವಾಗಲೇ ಪೂರಕವಾದ ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು ಎನ್ನುವ ಶಿಕ್ಷಣ ಇಲಾಖೆ ನಿಯಮವು, ಸಾಂಕ್ರಾಮಿಕ ರೋಗದ ಸಂದರ್ಭವನ್ನು ಬಳಸಿಕೊಂಡ ಕೆಲ ಸರ್ಕಾರಿ ಇಲಾಖೆಗಳು ಅನುಮತಿ ಪತ್ರ ನೀಡಲು ವಿಳಂಬ ಮಾಡಿದ್ದಾರೆ. ಪರಿಣಾಮ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಡಿಡಿಪಿಐ ವ್ಯಾಪ್ತಿಯಲ್ಲಿ ಕೇವಲ 1 ಶಾಲೆಗೆ ಮಾತ್ರ ಅನುಮತಿ ಸಿಕ್ಕಿದೆ. ಉಳಿದಂತೆ ರಾಜ್ಯದಲ್ಲಿ ನೂರಾರು ಶಾಲೆಗಳ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.
ಹೊಸ ಶಾಲೆಗಳಿಗಾಗಿ ಅರ್ಜಿ ಸಲ್ಲಿಸಿದ್ದ ಒಟ್ಟು 960 ಶಾಲೆಗಳಲ್ಲಿ 72 ಅರ್ಜಿಗಳು ಪ್ರಾರಂಭದಲ್ಲೇ ತಿರಸ್ಕೃತಗೊಂಡು, 620 ಪ್ರಾಥಮಿಕ ಹಾಗೂ 255 ಹೈಸ್ಕೂಲ್ ಅರ್ಜಿಗಳನ್ನು ಪರಿಗಣಿಸಿ ಪರಿಶೀಲನೆಗೆ ಒಳಪಡಿಸಿತ್ತು. ಬಹುತೇಕ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ. ಇದಕ್ಕೆ ಸರ್ಕಾರವೇ ನೇರ ಹೊಣೆ.
ಲೋಕೋಪಯೋಗಿ ಇಲಾಖೆಗೆ ಸರ್ಕಾರದ ನಿರ್ದೇಶನವಿಲ್ಲದೇ ಅವರು ಕಟ್ಟಡ ಸುರಕ್ಷಾ NOC ನೀಡದೆ ಶಾಲೆಗಳು ಅತಂತ್ರ ಅನುಭವಿಸುವಂತಾಗಿದೆ. ಸರ್ಕಾರ ಈ ಕುರಿತು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಮುಂದೆ ಹೊಸ ಶಾಲೆ ಪ್ರಾರಂಭಿಸುವ ಸಾಧ್ಯತೆ ಇಲ್ಲವಾಗುತ್ತದೆ ಎಂದು ತಾಳಿಕಟ್ಟೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.