ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಇದೇ ಡಿಸೆಂಬರ್ 18ರಂದು ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ವರ್ಷದ ಕೊನೆಯ ಲೋಕ ಅದಾಲತ್ ಏರ್ಪಡಿಸಿದ್ದು, ಈ ಸೇವೆ ಬಳಸಿಕೊಳ್ಳುವಂತೆ ವ್ಯಾಜ್ಯಗಳ ಪಕ್ಷಗಾರರಿಗೆ ಮನವಿ ಮಾಡಿದೆ.
ಲೋಕ ಅದಾಲತ್‌ನಲ್ಲಿ ಮೋಟಾರು ವಾಹನ ಪ್ರಕರಣಗಳು, ಅಮಲ್ಜಾರಿ ಪ್ರಕರಣಗಳು, ಪಾರ್ಟಿಷನ್ ಪ್ರಕರಣಗಳು, ಇತರೆ ಸಿವಿಲ್ ವ್ಯಾಜ್ಯಗಳು, ಎಜೆಕ್ಟ್ಮೆಂಟ್ ಪ್ರಕರಣಗಳು, ಭೂಸ್ವಾಧೀನ ಅಮಲ್ಜಾರಿ ಪ್ರಕರಣಗಳು, ಕ್ರಿಮಿನಲ್ ಕಾಂಪೌಂಡೇಬಲ್ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಲೋಕ ಅದಾಲತ್‌ನಲ್ಲಿ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಂಬಂಧ ಕೆಎಸ್ಎಲ್ಎಸ್ಎ ಕಾರ್ಯನಿರ್ವಾಹಕ ಅಧ್ಯಕ್ಷರಾದ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಈಗಾಗಲೇ ಇನ್ಶ್ಯೂರೆನ್ಸ್ ಕಂಪನಿಗಳು, ಬಿಬಿಎಂಪಿ, ಬಿಡಬ್ಲ್ಯೂಎಸ್ಎಸ್ ಬಿ, ಕೆಪಿಟಿಸಿಎಲ್, ಬೆಸ್ಕಾಂ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಪ್ರಾಧಿಕಾರಗಳ ಜತೆ ಸಭೆ ನಡೆಸಿದ್ದಾರೆ.
ಈ ಬಾರಿ ಗ್ರಾಹಕರ ವೇದಿಕೆ, ಸಾಲ ವಸೂಲಾತಿ ನ್ಯಾಯಮಂಡಳಿ, ಕಾಯಂ ಜನತಾ ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ಕೂಡ ಈ ಬಾರಿಯ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲು ನಿರ್ಧರಿಸಲಾಗಿದೆ. ಆದ್ದರಿಂದ ವ್ಯಾಜ್ಯಗಳ ಪಕ್ಷಗಾರರು ಡಿ. 18ರವರೆಗೂ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕೆಎಸ್ಎಲ್ಎಸ್ಎ ಕಾರ್ಯನಿರ್ವಾಹಕ ಅಧ್ಯಕ್ಷರಾದ ನ್ಯಾ. ಬಿ. ವೀರಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: ನನಗೆ ಕಾಂಗ್ರೆಸ್ ನಾಯಕರ ಸರ್ಟಿಫಿಕೇಟ್ ಬೇಕಿಲ್ಲ, ಜನರ ಸರ್ಟಿಫಿಕೇಟ್ ಸಾಕು : ಸಿಎಂ ಬೊಮ್ಮಾಯಿ