ಬೆಂಗಳೂರು: ರಾಜ್ಯದಲ್ಲಿ ಸೆಮಿ ಲಾಕ್ ಡೌನ್ ಹೇರಿದ ದಿನದಿಂದಲೂ ತರಕಾರಿ ಬೆಲೆಗಳು ದಿನಕ್ಕೊಂದು ಬೆಲೆಯಲ್ಲಿ ಮಾರಾಟವಾಗುತ್ತಿದೆ. ಆರಂಭದ ದಿನಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದ ತರಕಾರಿಗಳ ಬೆಲೆ ಒಂದೇ ಬಾರಿಗೆ ಗಗನಕ್ಕೇರಿದವು. ನಂತರದ ದಿನದಲ್ಲಿ ಸ್ವಲ್ಪ ಕಡಿಮೆಯಾದರೂ, ನಿತ್ಯ ಬೆಲೆಗಳಲ್ಲಿ ಏರಿಳಿತವಾಗುತ್ತಿದೆ.
ಇದರಿಂದ ಚಿಲ್ಲರೆ ವ್ಯಾಪಾರಿಗಳು ತಮ್ಮ ಗ್ರಾಹಕರು ತಪ್ಪಿ ಹೋಗಬಾರದು ಎಂಬ ಕಾರಣಕ್ಕೆ ಕಡಿಮೆ ಬೆಲೆಯಲ್ಲೇ ಮಾರಾಟ ಮಾಡಿನಷ್ಟ ಅನುಭವಿಸುತ್ತಿದ್ದಾರೆ. ಇನ್ನೊಂದೆಡೆ ಹಾಪ್ ಕಾಮ್ಸ್ನಲ್ಲೂ ತರಕಾರಿ, ಹಣ್ಣುಗಳ ಬೆಲೆ ಏರಿಕೆ ಕಂಡಿದೆ. ವಿದೇಶಿ ಹಣ್ಣುಗಳಾದ ನ್ಯೂಜಿಲ್ಯಾಂಡ್ ಗಾಲಾ ಆಪಲ್ ಬೆಲೆ 265 ಕ್ಕೆ ಏರಿಕೆಯಾಗಿದ್ದು, ಕಿತ್ತಳೆ ಹಣ್ಣಿನ ಬೆಲೆ 144, ಮೂಸಂಬಿ 160 ರೂ.ಗೆ ಮಾರಾಟವಾಗುತ್ತಿದೆ.
ಬೀದಿ ಬದಿ ವ್ಯಾಪಾರಿಯಾಗಿರುವ ಪಳನಿ ಮಾತನಾಡಿ, ಹಾಗಲಕಾಯಿ, ಗೆಡ್ಡೆಕೋಸುಗಳ ಬೆಲೆ ಹೆಚ್ಚಾಗಿದೆ. ಎಲ್ಲ ದಿನ ಒಂದೊಂದು ರೇಟಲ್ಲಿ ಮಾರಾಟ ಆಗುತ್ತಿದೆ. ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಿದೆ. ಹಾಗಂತ ಜನಕ್ಕೆ ಹೆಚ್ಚು ಬೆಲೆಗೆ ಮಾರಾಟ ಮಾಡಿದರೆ ಬೇರೆ ಕಡೆ ಕಡಿಮೆ ಇದೆ ಅಂತ ಗ್ರಾಹಕರು ಕೊಳ್ಳೋದನ್ನೇ ಬಿಟ್ಟು ಬಿಡ್ತಾರೆ. ಕ್ಯಾರೆಟ್ 60, 80 ರೂ. ಇತ್ತು ಈಗ ಸ್ವಲ್ಪ ಕಡಿಮೆ ಆಗಿದೆ. ಮಾರುಕಟ್ಟೆಗಿಂತ ಕೇವಲ ಐದು, ಹತ್ತು ಹೆಚ್ಚುಮಾಡಿ ಮಾರುತ್ತೇವೆ. ಆದರೂ ಬೆಲೆ ಹೆಚ್ಚಾದರೆ ಜನ ಕೊಳ್ಳುವುದಿಲ್ಲ ಎಂದರು.
ಇನ್ನು ಹಾಪ್ ಕಾಮ್ಸ್ ವ್ಯಾಪಾರಿ ಗಂಗತಿಮ್ಮಯ್ಯ ಮಾತನಾಡಿ, ವಾರದಿಂದ ಈಚೆಗೆ ಸ್ವಲ್ಪ ಬೆಲೆ ಕಡಿಮೆಯಾಗಿದೆ. ಬೇರೆ ದೇಶದಿಂದ ಬರುವ ಹಣ್ಣುಗಳಿಗೆ ಬೆಲೆ ಹೆಚ್ಚಾಗಿದೆ ಎಂದು ತಿಳಿಸಿದರು.
ಚಿಲ್ಲರೆ ವ್ಯಾಪಾರ ಹಾಗೂ ಹಾಪ್ ಕಾಮ್ಸ್ ತರಕಾರಿಗಳ ದರಗಳ ವಿವರ ಈ ಕೆಳಗಿನಂತಿವೆ.
ತರಕಾರಿಗಳ ಹೆಸರು | ಕನಿಷ್ಠ ದರ | ಗರಿಷ್ಠ ದರ | ಹಾಪ್ ಕಾಮ್ಸ್ ದರ |
ಕ್ಯಾರೆಟ್ | 40 | 80 | 40 |
ಬೀನ್ಸ್ | 80 | 120 | 80 |
ಮೂಲಂಗಿ | 40 | 200 | 36 |
ಟೊಮೇಟೊ | 10 | 15 | 10 |
ಬದನೆ | 40 | 40 | 34 |
ತೊಂಡೆಕಾಯಿ | 40 | 60 | 28 |
ಕ್ಯಾಪ್ಸಿಕಮ್ | 40 | 80 | 30 |
ನವಿಲುಕೋಸು | 60 | 60 | 60 |
ಎಲೆಕೋಸು (ಕೆ.ಜಿ) | 10 | 20 | 19 |
ಹಾಗಲಕಾಯಿ | 120 | 120 | 60 |
ನುಗ್ಗೆಕಾಯಿ | 70 | 70 | 68 |