ಬೆಂಗಳೂರು: ನೀವು ಒಂದೇ ಮಗುವಿನ ಪಾಲಕರಾ? ಮಗು ಸಾಕಷ್ಟು ಒಂಟಿತನ ಸಮಸ್ಯೆ ಅನುಭವಿಸುತ್ತಿದೆಯಾ? ಪಾಲಕರಾಗಿ ನೀವು ಉದ್ಯೋಗಿಗಳಾಗಿದ್ದು, ಮಗುವಿನೊಂದಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲವಾ? ಹಾಗಾದ್ರೆ ನಿಮ್ಮ ಮಗು ಅಪಾಯದಲ್ಲಿದೆ ಎಂದೇ ಅರ್ಥ!
ಕೊರೊನಾ ಕಾರಣದಿಂದ ಶಾಲಾ-ಕಾಲೇಜುಗಳ ಸುದೀರ್ಘ ರಜೆಯಿಂದ ಉಂಟಾಗಿರುವ ಒಂಟಿತನದಿಂದ ಮಕ್ಕಳಲ್ಲಿ ಖಿನ್ನತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಂಶೋಧನೆಯೊಂದು ಹೇಳಿದೆ. ತನ್ನ ಸಹೋದರ, ಸಹೋದರಿಯರನ್ನು ಹೊಂದದ ಮಗುವಿನ ಮೇಲೆ ಗಾಢ ಪರಿಣಾಮವಾಗುತ್ತದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಹೇಳಿದೆ. ಅಂದರೆ ಸಾಮಾನ್ಯವಾಗಿ ಹದಿಹರೆಯದವರಿಗೆ ಉಂಟಾಗುವ ಮೂರು ಪಟ್ಟು ಹೆಚ್ಚು ಖಿನ್ನತೆ ಮಕ್ಕಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಂಶೋಧನೆಯೊಂದು ದೃಢಪಡಿಸಿದೆ.
ಇದರಿಂದ ಶಾಲೆ, ಕಾಲೇಜಿಗೆ ತೆರಳುವ ಮಕ್ಕಳನ್ನು ಹೊಂದಿರುವ ಪಾಲಕರು ಎಷ್ಟು ಎಚ್ಚರ ವಹಿಸಿದರೂ ಉತ್ತಮ. ಅಷ್ಟೇ ಅಲ್ಲ ಈ ಒಂಟಿತನ ತರುವ ಕೆಟ್ಟ ಪರಿಣಾಮ, ಮಗುವಿನ 9 ವರ್ಷದವರೆಗೆ ಇರುವ ಸಂಭವನೀಯತೆಯೂ ಇದೆ.
ಸಂಶೋಧನೆ ವಿವರ
ಬಾತ್ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಕ್ಲಿನಿಕಲ್ ಮನ:ಶಾಸ್ತ್ರಜ್ಞ ಡಾ.ಮಾರಿಯಾ ಲೋಡೆಸ್ ಜೂನ್ 1ರಂದು ಬಿಡುಗಡೆ ಮಾಡಿದ ಜರ್ನಲ್ ಆಫ್ ದ ಅಮೆರಿಕನ್ ಅಕಾಡೆಮಿ ಆಫ್ ಚೈಲ್ಡ್ ಆ್ಯಂಡ್ ಅಡೋಲೆಸೆಂಟ್ ಸೈಕಿಯಾಟ್ರಿ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಇದರಲ್ಲಿ ಸಂಶೋಧನೆಯನ್ನು ಸವಿಸ್ತಾರವಾಗಿ ವಿವರಿಸಲಾಗಿದ್ದು, ಮಕ್ಕಳು ಅನುಭವಿಸುವ ಸಂಕಟ, ವೇದನೆ, ಸಮಸ್ಯೆಯ ಕುರಿತು ಕೆಲವೊಂದು ಮುಖ್ಯ ವಿಚಾರಗಳನ್ನು ಬಹಿರಂಗಪಡಿಸಿಲಾಗಿದೆ.
ಈಗ ಅತ್ತ ದರಿ, ಇತ್ತ ಪುಲಿ..!
ಶಾಲೆ ಆರಂಭವಾಗಿಲ್ಲ. ಆನ್ಲೈನ್ ಕ್ಲಾಸ್ ಅರ್ಥವಾಗುತ್ತಿಲ್ಲ. ಶಾಲೆಗೆ ಕಳುಹಿಸಿದರೆ ಶಾರೀರಿಕ ಆರೋಗ್ಯದ ಭಯ, ಅತ್ತ ಕಳಿಸದಿದ್ದರೆ ಮಾನಸಿಕ ಆರೋಗ್ಯದ ತೊಂದರೆ ಈಗೇನು ಮಾಡುವುದು ಎನ್ನುವುದೇ ಪಾಲಕರಿಗೆ ದೊಡ್ಡ ತಲೆಬಿಸಿಯಾಗಿದೆ. ಅಂದ ಹಾಗೆ, ಶಾಲೆಗೆ ಹೋಗುವುದು ಅಂದರೆ ಮಕ್ಕಳಿಗೆ ದೊಡ್ಡ ತಲೆ ಬಿಸಿ. ಆದರೆ ಈಗ ಮನೆಯಲ್ಲಿ ಖಾಲಿ ಕೂರುವುದು ತಲೆ ಚಿಟ್ಟು ಹಿಡಿಯುವಂತೆ ಮಾಡಿದೆ. ಶಾಲೆ, ಕಾಲೇಜಿಗಾದ್ರೂ ಹೋಗ್ತೀನಿ ಮನೆಯಲ್ಲಿ, ಒಬ್ಬನೇ ಕೂರಲು ಆಗಲ್ಲ ಅನ್ನುವ ಸ್ಥಿತಿ ಇದೆ.
ಪೋಷಕರು ಏನು ಮಾಡಬೇಕು?
ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕರಾದ ರೂಪಾ ಎಲ್ ರಾವ್ ಪ್ರಕಾರ, ನಿಜವಾಗಿಯೂ ಈ ಸಂದರ್ಭದಲ್ಲಿ ಪಾಲಕರು, ಪೋಷಕರು ಮಕ್ಕಳೊಂದಿಗೆ ಹೆಚ್ಚು ಕಾಲ ಕಳೆದು, ಅವರೊಂದಿಗೆ ಹೆಚ್ಚೆಚ್ಚು ಮಾತನಾಡಬೇಕು. ಕ್ರಿಯಾತ್ಮಕ ಚಟುವಟಿಕೆ ಜತೆ ಒಂದಿಷ್ಟು ಫನ್ನಿಯಾಗಿ ನಡೆದುಕೊಂಡು ಮಕ್ಕಳ ಒಂಟಿತನ ಭಾವದಿಂದ ದೂರ ತರಬೇಕು. ವಿಶೇಷವಾಗಿ ಒಬ್ಬರೇ ಮಕ್ಕಳಿದ್ದು ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗುವಂತಿದ್ದರೆ ಈ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕು.
ಈ ಹದಿಹರೆಯದವರು ಪೋಷಕರಿಂದ ಕೊಂಚ ದೂರ ಇರುವುದನ್ನು ಬಯಸುತ್ತಾರೆ. ಅವರಿಗೆ ಅವರ ಆತ್ಮೀಯ ಗೆಳೆಯ/ಗೆಳತಿಯರೊಂದಿಗೆ ಮಾತನಾಡಲು ಅನುವು ಮಾಡಿಕೊಡುವುದು. ಫೋನ್ ಮೂಲಕವಾದರೂ ಸರಿ ಅಥವಾ ಮುಖಾಮುಖಿಯಾದರೂ ಸರಿ ಕೊಡಿಸುವುದು. ಎಲ್ಲಕ್ಕಿಂತ ಮುಖ್ಯವಾಗಿ ಈ ಭಾವನೆಗಳನ್ನು ಗುರುತಿಸುವುದು ಮತ್ತು ಅವುಗಳ ನಿರ್ವಹಣೆ ಮಾಡುವ ಕಲೆಯನ್ನು ಕಲಿಸಿಕೊಡಬೇಕು.