ಬೆಂಗಳೂರು: ಪದ್ಮನಾಭನಗರ ಮುಖ್ಯರಸ್ತೆಯಲ್ಲಿರುವ ಕಾರ್ಮೆಲ್ ಕನ್ನಡ ಶಾಲೆಯ ಪಕ್ಕದಲ್ಲಿರುವ 3 ಸಾವಿರ ಚದರ್ ಅಡಿ ವಿಸ್ತೀರ್ಣದ ಆಟದ ಮೈದಾನವನ್ನು ತನಗೆ ಹಸ್ತಾಂತರಿಸಬೇಕು’ ಎಂದು ಕೋರಿ ಬಿಬಿಎಂಪಿ, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಪತ್ರ ಬರೆದಿದ್ದು, ಈ ಸಂಬಂಧದ ಪರಭಾರೆ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಪ್ರಕರಣದ ಕುರಿತಂತೆ ಜಯನಗರ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್ ಕಾರ್ಯದರ್ಶಿ ಎಂ.ಶಿವಣ್ಣ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವೆಂಕಟೇಶ್ ಪಿ.ದಳವಾಯಿ ವಾದ ಮಂಡಿಸಿ, ಖಾಸಗಿ ಕನ್ನಡ ಮಾಧ್ಯಮ ಶಾಲೆಯಾದ ಕಾರ್ಮೆಲ್ ವಿದ್ಯಾಸಂಸ್ಥೆಯಲ್ಲಿ ಎಲ್.ಕೆ.ಜಿಯಿಂದ ಏಳನೇ ತರಗತಿವರೆಗೆ ಸುಮಾರು 400 ಮಕ್ಕಳು ಕಲಿಯುತ್ತಿದ್ದಾರೆ. 15 ಮಂದಿ ಬೋಧಕ ಸಿಬ್ಬಂದಿಗಳಿದ್ದಾರೆ. ಈಗ ಏಕಾಏಕಿ ಈ ಪ್ರದೇಶವನ್ನು ತನಗೆ ಹಸ್ತಾಂತರಿಸಬೇಕು ಎಂದು ಬಿಬಿಎಂಪಿ, ಬಿಡಿಎಗೆ ಮನವಿ ಸಲ್ಲಿಸಿದೆ. ಈ ಕೋರಿಕೆಯ ಹಿಂದೆ ಸ್ಥಳೀಯ ಶಾಸಕರೂ ಆದ ಕಂದಾಯ ಸಚಿವ ಆರ್.ಅಶೋಕ್ ಅವರ ನೇರ ಕುಮ್ಮಕ್ಕು ಇದೆ. ಆದ್ದರಿಂದ, ಈ ಜಾಗದ ಪರಭಾರೆ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಕೋರಿದ್ದಾರೆ.
ಮನವಿಗೆ ಪ್ರತಿಕ್ರಿಯಿಸಿದ ಪೀಠ, ‘ಹಾಗಾದರೆ ಸಚಿವರನ್ನೂ ಇದರಲ್ಲಿ ಪ್ರತಿವಾದಿ ಮಾಡಬೇಕಲ್ಲವೇ‘ ಎಂದು ಪ್ರಶ್ನಿಸಿದೆ. ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲರು, ಸಚಿವರು ಸೂಚನೆ ನೀಡಿರುವುದಕ್ಕೆ ಯಾವುದೇ ದಾಖಲೆ ಇಲ್ಲ. ಆದ್ದರಿಂದ, ಅವರ ಬದಲಿಗೆ ಈಗಿರುವ ಪ್ರತಿವಾದಿಗಳಿಗೇ ತಾವು ಆದೇಶ ಮಾಡಬಹುದು’ ಎಂದು ಕೋರಿದರು. ಮನವಿ ಪುರಸ್ಕರಿಸಿದ ಪೀಠ, ಬಿಬಿಎಂಪಿ ದಕ್ಷಿಣ ವಲಯದ ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್, ಬಿಡಿಎ ಸಹಾಯಕ ಕಾರ್ಯಪಾಲಕ ಎಂಜನಿಯರ್ ಮತ್ತು ಬಿಡಿಎ ಪ್ರದೇಶಾಧಿಕಾರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ, ವಿಚಾರಣೆ ಮುಂದೂಡಿದೆ.
ಏನಿದು ಪ್ರಕರಣ ?: ಬಿಬಿಎಂಪಿಯ 182ನೇ ವಾರ್ಡ್‌ನಲ್ಲಿ ಕಾರ್ಮೆಲ್ ಶಾಲೆ ನಡೆಸಲು ಈ ಹಿಂದೆ ಬಿಡಿಎ ವತಿಯಿಂದ ಅನುಮತಿ ನೀಡಲಾಗಿತ್ತು. ಅನುಮತಿಯ ಅವಧಿ 2022ರ ಫೆಬ್ರವರಿಗೆ ಮುಕ್ತಾಯಗೊಂಡಿರುವುದರಿಂದ ಮುಂದಿನ ಅವಧಿಗೆ ವಿದ್ಯಾಸಂಸ್ಥೆ ನಡೆಸಲು ಅನುಮತಿ ನೀಡಬಾರದು ಎಂದು ಸ್ಥಳೀಯ ಶಾಸಕರೂ ಆದ ಸಚಿವರು ಸೂಚಿಸಿರುತ್ತಾರೆ’ ಎಂದು ಬಿಬಿಎಂಪಿ ಅಧಿಕಾರಿಗಳು ಬಿಡಿಎಗೆ ಪತ್ರ ಬರೆದು ಮೈದಾನವನ್ನು ಹಸ್ತಾಂತರಿಸುವಂತೆ ಕೋರಿದ್ದಾರೆ.
‘ಸಾರ್ವಜನಿಕರು ಹಾಗೂ ಪಾಲಿಕೆಯ ಆಸ್ತಿಯನ್ನು ಸಂರಕ್ಷಿಸುವ ಹಿತದೃಷ್ಟಿಯಿಂದ ಈ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದು ಅತ್ಯವಶ್ಯವಿದೆ ಎಂದು ಬಿಬಿಎಂಪಿ ದಕ್ಷಿಣ ವಲಯದ ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಅವರು, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರಿಗೆ ಕಳೆದ ತಿಂಗಳ 10ರಂದು ಪತ್ರ ಬರೆದಿದ್ದಾರೆ. ಸ್ಥಳೀಯ ಶಾಸಕರು ಹಾಗೂ ಕಂದಾಯ ಸಚಿವರ ಸೂಚನೆಯಂತೆ ಈ ಪ್ರದೇಶವನ್ನು ಪಾಲಿಕೆಗೆ ಹಸ್ತಾಂತರಿಸಬೇಕು’ ಎಂದೂ ಈ ಪತ್ರದಲ್ಲಿ ವಿವರಿಸಲಾಗಿದೆ.
ಈ ಪತ್ರವನ್ನು ಆಧರಿಸಿ ಮುಂದಿನ ಪ್ರಕ್ರಿಯೆಗಳನ್ನು ಪ್ರಶ್ನಿಸಿರುವ ಅರ್ಜಿದಾರರು, ‘ಪದ್ಮನಾಭನಗರ ಲೇಔಟ್ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಸೊಸೈಟಿ ಬಿಡಿಎ ವತಿಯಿಂದ ಅನುಮತಿ ಪಡೆದಿದೆ. ಈ ಅನುಮತಿಯನ್ನು 30 ವರ್ಷಗಳ ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ. ಈ 30 ವರ್ಷಗಳ ಅನುಮತಿ ಮುಂದುವರಿಕೆ ಅಥವಾ ನವೀಕರಣಕ್ಕೆ ಸಂಬಂಧಿಸಿದ ಪ್ರಕ್ರಿಯೆ ಇನ್ನೂ ಬಾಕಿ ಉಳಿದಿರುವ ಮಧ್ಯದಲ್ಲೇ ಬಿಬಿಎಂಪಿ ದಕ್ಷಿಣ ವಲಯದ ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಅವರು, ಜಾಗ ಒಪ್ಪಿಸುವಂತೆ ಬಿಡಿಎ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈ ಒತ್ತಡದ ಹಿಂದೆ ಸ್ಥಳೀಯ ಶಾಸಕರೂ ಆದ ಕಂದಾಯ ಸಚಿವ ಆರ್.ಅಶೋಕ್ ಅವರ ನೇರ ಹಸ್ತಕ್ಷೇಪ ಇದೆ’ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಓದಿ : 'ಮೇ ತಿಂಗಳ ವೇಳೆಗೆ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಚಿಕಿತ್ಸಾ ಕೇಂದ್ರ ಸಿದ್ಧ'