ಬೆಂಗಳೂರು: ಸಿದ್ದರಾಮಯ್ಯ ನೂರು ಕಾಲ ಬದುಕಲಿ. ಆದರೆ, ಅವರು ಹೋದ ಪಕ್ಷ ಛಿದ್ರ ಛಿದ್ರ ಆಗುತ್ತದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಿಡಿ ಕಾರಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಇನ್ನು ಯಾವತ್ತೂ ಸಿಎಂ ಆಗುವುದಿಲ್ಲ. ಅವರು ಐದು ವರ್ಷ ಸಿಎಂ ಆಗಿದ್ದೇ ದೊಡ್ಡ ಸಾಧನೆ. ಅವರ ಪಕ್ಷವನ್ನು ಅವರೇ ಸಾಯಿಸುತ್ತಿದ್ದಾರೆ. ಆದರೆ, ಅವರು ನೂರು ಕಾಲ ಬದುಕಬೇಕು. ಸಿದ್ದರಾಮಯ್ಯಗೆ ಸಿಎಂ ಆಗ್ತೇನೆ ಎಂಬ ಹುಚ್ಚು ಹಿಡಿದಿದೆ. ಅವರು ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮುಪ್ಪಿನಲ್ಲಿದ್ದು, ದೇಶದ ಬಗ್ಗೆ ಜನರ ಧ್ಯಾನ ಮಾಡಿ ಬಿಜೆಪಿ ಸರ್ಕಾರವನ್ನು ನೋಡಿ ಕಲಿಯಲಿ. ಅವರೇ ಸಿಎಂ ಅಂಥ ಹೇಳುತ್ತಿದ್ದಾರೆ. ಅವರ ಜತೆ ಯಾರೂ ಇಲ್ಲ. ಈ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷ ನಿರ್ಧರಿಸಲ್ವಾ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ನಂಬಿದ ವ್ಯಕ್ತಿಯನ್ನು ಉದ್ಧಾರ ಮಾಡಿದ್ದಾರಾ? ಹೆಚ್.ವಿಶ್ವನಾಥ್ರನ್ನು ಮುಳುಗಿಸಿದ್ದರು. ವಿಜಯ ಶಂಕರ್ರನ್ನು ಕಾಂಗ್ರೆಸ್ಗೆ ಕರೆದೊಯ್ದು ಸೋಲಿಸಿದರು. ಭೈರತಿ ಬಸವರಾಜು, ಎಂಟಿಬಿ ಬಗ್ಗೆ ಕೆಟ್ಟದಾಗಿ ಬಳಸುತ್ತಿದ್ದಾರೆ. ಅವರಿಬ್ಬರೂ ಸಿದ್ದರಾಮಯ್ಯ ಸಿಎಂ ಆಗಲು ಹಣ ಕೊಟ್ಟಿದ್ದರು. ಈಗ ಅವರನ್ನೇ ಬಯ್ಯುತ್ತಿದ್ದಾರೆ. ಅವರ ಹಿತೈಷಿಗಳನ್ನು ತುಳಿಯುವಂತಹ ವ್ಯಕ್ತಿ ಸಿದ್ದರಾಮಯ್ಯ. ಯಾವೊಬ್ಬ ಕುರುಬರನ್ನು ಉದ್ಧಾರ ಮಾಡಿಲ್ಲ. ಸಂಖ್ಯಾ ಬಲ ಇಲ್ಲದಿದ್ದರೂ ಖರ್ಗೆಯನ್ನು ರಾಜ್ಯಸಭೆಗೆ ಅಭ್ಯರ್ಥಿಯಾಗಿ ನಿಲ್ಲಿಸಲು ಹೊರಟಿದ್ದಾರೆ. ಆ ಮೂಲಕ ಅವರನ್ನೂ ಮುಗಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಡಿಕೆಶಿ ಸೇಬಿನ ಹಾರದ ಸರದಾರ ಆಗಿದ್ದಾರೆ. ಕೆ.ಎಚ್.ಮುನಿಯಪ್ಪ ಸಿದ್ದರಾಮಯ್ಯರನ್ನು ಹಿಗ್ಗಾಮುಗ್ಗಾ ಬಯ್ತಾ ಇದ್ದಾರೆ. ರಮೇಶ್ ಕುಮಾರ್ ಸತ್ಯ ಹರಿಶ್ಚಂದ್ರ. ಅಂಬೇಡ್ಕರ್ ಬಿಟ್ರೆ, ಅವರೇ ಅನ್ನೋ ತರ ಆಡುತ್ತಿದ್ದಾರೆ. ಅವರೊಬ್ಬ ಪಕ್ಷ ದ್ರೋಹಿ. ಲೋಕಸಭೆ ಚುನಾವಣೆಯಲ್ಲಿ ಅವರು ಕೆ.ಎಚ್.ಮುನಿಯಪ್ಪರನ್ನು ಸೋಲಿಸಿಲ್ಲ ಎಂದು ಅವರು ಎದೆ ಮುಟ್ಟಿ ಹೇಳಲಿ. ಸಿದ್ದರಾಮಯ್ಯ ಕೂಡ ಪಕ್ಷ ದ್ರೋಹಿ ಆಗಿದ್ದಾರೆ. ದೇವೇಗೌಡರನ್ನು ಸೋಲಿಸಲು ಸಿದ್ದರಾಮಯ್ಯ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹೆಚ್ಡಿಕೆ ಹೋದಲ್ಲೆಲ್ಲಾ ಕಣ್ಣೀರು ಹಾಕುತ್ತಿದ್ದಾರೆ. ತೆನೆ ಹೊತ್ತ ಮಹಿಳೆ ಬದಲು ಜೆಡಿಎಸ್ ಅವರು ಕಣ್ಣೀರು ಹಾಕುವ ಮಹಿಳೆಯನ್ನು ನಿಲ್ಲಿಸುವುದು ಒಳ್ಳೆಯದು ಎಂದು ಟಾಂಗ್ ನೀಡಿದರು.