ಬೆಂಗಳೂರು : ಕೋವಿಡ್ ಹಿಂದೆ ಬಹಳ ಸಿರೀಯಸ್ ಇತ್ತು. ಈಗ ಸೋಂಕು ಅಷ್ಟು ಆತಂಕಕಾರಿಯಾಗಿಲ್ಲ. ಇದರಿಂದ ಶಾಲಾ- ಕಾಲೇಜು ಮುಚ್ಚಬೇಡಿ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಶಾಲೆಗಳಿಗೆ ಬಿಡುವು ಕೊಡುವುದು ಬೇಡ. ಬಿಡುವು ಕೊಟ್ಟರೆ ಮಕ್ಕಳ ಶೈಕ್ಷಣಿಕ ಜೀವನ ಹಾಳಾಗುತ್ತದೆ. ಅಂತರವನ್ನು ಕಾಪಾಡಿಕೊಂಡು ಶಾಲೆ ನಡೆಸಿ. ನಿಯಮ ಪಾಲಿಸಿ ಮಕ್ಕಳಿಗೆ ಪಾಠ ಮಾಡುವುದು ಉತ್ತಮ ಎಂದರು.
ಇದೇ ರೀತಿ ಶಾಲೆಗೆ ರಜೆ ಕೊಟ್ಟರೆ ಮುಂದೆ ಕಷ್ಟವಾಗುತ್ತದೆ. ಮಕ್ಕಳು ಮತ್ತಷ್ಟು ಹಾಳಾಗುತ್ತಾರೆ. 1 ರಿಂದ 5ರವರೆಗೆ ಶಾಲೆ ಬಂದ್ ಮಾಡಿ. 6 ರಿಂದ ಕಾಲೇಜು ಹಂತದ ಎಲ್ಲಾ ತರಗತಿಗಳನ್ನು ನಡೆಸಿ.
ಮಕ್ಕಳು ಶಾಲೆಗೆ ಹೋಗದಿದ್ದರೆ ಸಮಸ್ಯೆ ಆಗಲಿದೆ. ಮಕ್ಕಳು ಕಲಿಕೆಯಿಂದ ಹಿಂದೆ ಬೀಳ್ತಾರೆ. ಪೋಷಕರು, ಶಾಲೆಗಳು ಕಾಳಜಿ ಮಾಡಬೇಕು. ಮಕ್ಕಳಿಗೆ ಶಿಕ್ಷಣ ಮುಂದುವರಿಸಬೇಕು ಎಂದರು.
ಜಿಲ್ಲಾಧಿಕಾರಿಗಳಿಗೆ ಶಾಲೆ ಅಧಿಕಾರ ನೀಡಬೇಡಿ : ಶಾಲೆಗಳ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಜಿಲ್ಲಾಧಿಕಾರಿಗಳಿಗೆ ಅಧಿಕಾರ ಕೊಟ್ಟರೆ ಸರಿಯಲ್ಲ. ಒಂದೊಂದು ಜಿಲ್ಲೆಗೆ ಒಂದು ರೀತಿ ಬೇಡ. ತೆಗೆದುಕೊಂಡರೆ ಒಂದೇ ತೀರ್ಮಾನ ಇರಬೇಕು. ವಿದ್ಯಾಗಮನ ಅಂತಾ ಮಾಡಿದ್ರು. ವಿದ್ಯಾಗಮನಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಯಿತು. ಗುಡಿಯಲ್ಲಿ, ಮರದ ಕೆಳಗೆ ಶಿಕ್ಷಣ ನೀಡುವುದು ಸರಿಯಲ್ಲ ಎಂದರು.
ಆನ್ಲೈನ್ ಶಿಕ್ಷಣವೂ ಸರಿಯಲ್ಲ. ಆನ್ಲೈನ್ ಶಿಕ್ಷಣ ಸಿಟಿಗೆ ಮಾತ್ರ ಅನ್ವಯ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆಗಲ್ಲ. ನೆಟ್ವರ್ಕ್ ಇರಲ್ಲ, ಕರೆಂಟ್ ಇರಲ್ಲ, ಮೊಬೈಲ್ ಇರಲ್ಲ. ಅಂತಹ ಮಕ್ಕಳಿಗೆ ಶಿಕ್ಷಣ ನೀಡುವುದು ಕಷ್ಟವಾಗುತ್ತದೆ. ಶ್ರೀಮಂತರ ಮಕ್ಕಳು ಕಲಿಯುತ್ತಾರೆ. ಬಡ ಮಕ್ಕಳು ಶಿಕ್ಷಣದಿಂದ ಹಿಂದೆ ಬೀಳ್ತಾರೆ ಎಂದರು.
ಇದನ್ನೂ ಓದಿ: ಬಿಜೆಪಿ ಕಾರ್ಯಕ್ರಮಗಳಲ್ಲಿ ಕೇವಲ 30 ಜನರಿದ್ದರಾ, ಅವ್ರು ನನ್ ಜೈಲಿಗೆ ಹಾಕಿ ಖುಷಿಪಡಲಿ ಬಿಡಿ - ಡಿಕೆಶಿ