ಬೆಂಗಳೂರು: ಕೊರೊನಾ ವೈರಸ್ ಹೆಚ್ಚು ಬಾಧಿಸುತ್ತಿದ್ದು, ಹೇಗಾದರೂ ಸರಿ ನಿಯಂತ್ರಣಕ್ಕೆ ತರಲೇಬೇಕೆಂದು ಸರ್ಕಾರ ಪಣ ತೊಟ್ಟಿದೆ. ಹೀಗಾಗಿಯೇ ಸದ್ಯ ಬಿಎಂಟಿಸಿಯು ತನ್ನ ನೌಕರರಿಗೆ ರಜೆ ವಿನಾಯಿತಿ ನೀಡಲು ಮುಂದಾಗಿದೆ.
ಹೌದು, ಬಿಎಂಟಿಸಿಯಲ್ಲಿರುವ 50 ವರ್ಷ ಮೇಲ್ಪಟ್ಟ ನೌಕರರಿಗೆ ಹಾಗೂ ಮಧುಮೇಹ, ಶ್ವಾಸಕೋಶ, ಕಿಡ್ನಿ ತೊಂದರೆಗಳು ಹಾಗೂ ಇತರೆ ಅಪಾಯಕಾರಿ ಕಾಯಿಲೆಗಳಿಂದ ಬಳಲುತ್ತಿರುವ ಸರ್ಕಾರದ ನೌಕರರು ರಜೆ ಕೇಳಿದ್ದಲ್ಲಿ, ವೈದ್ಯಕೀಯ ಪ್ರಮಾಣ ಪತ್ರದ ಜೊತೆಗೆ ರಜೆ ಮಂಜೂರು ಮಾಡುವಂತೆ ಆದೇಶಿಸಲಾಗಿದೆ. 50 ವರ್ಷ ಮೇಲ್ಪಟ್ಟವರಲ್ಲಿ ಸೋಂಕು ಬೇಗ ಹರಡುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರವನ್ನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
![BMTC](https://etvbharatimages.akamaized.net/etvbharat/prod-images/6512757_1021_6512757_1584945344519.png)
ಎಲ್ಲಾ ಇಲಾಖಾ ಮುಖ್ಯಸ್ಥರು, ಅವರ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ದೈನಂದಿನ ಕೆಲಸ ಕಾರ್ಯಗಳಿಗೆ ಅಡಚಣೆಯಾಗದಂತೆ ಸಮವಾಗಿ ಎರಡು ಪ್ರತ್ಯೇಕ ಗುಂಪುಗಳನ್ನಾಗಿ ಮಾಡುವಂತೆ ತಿಳಿಸಲಾಗಿದೆ. ಪ್ರತಿ ವಾರ ರೊಟೇಷನ್ ಆಧಾರದ ಮೇಲೆ ಒಂದು ಗುಂಪಿನ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕಚೇರಿಯ ದೈನಂದಿನ ಕೆಲಸ ಕಾರ್ಯಗಳಿಗೆ ಉಪಯೋಗಿಸಿಕೊಳ್ಳುವುದು, ಮತ್ತೊಂದು ಗುಂಪಿನ ಅಧಿಕಾರಿ ಹಾಗೂ ಸಿಬ್ಬಂದಿ ಮನೆಯಿಂದಲೇ ಕಚೇರಿ ಕೆಲಸ ನಿರ್ವಹಿಸಲು ಅವಕಾಶವಿದೆ. ಅದರಂತೆ ಕ್ರಮ ಜರುಗಿಸುವುದು, ಇಲ್ಲದಿದ್ದಲ್ಲಿ ಅವರುಗಳನ್ನು ರಜೆ ಮೇಲೆ ಕಳುಹಿಸುವಂತೆ ಸೂಚಿಸಲಾಗಿದೆ.